ಕ್ರಿಕೆಟರ್ ಆಗುವ ಬಯಕೆಯಿಂದ ಊರು ತೊರೆದು ವಾಪಸ್ಸಾದ ಬಾಲಕರು

| Published : Jun 02 2024, 01:47 AM IST

ಸಾರಾಂಶ

ರಾಮನಗರ: ಕ್ರಿಕೆಟರ್ ಆಗುವ ಬಯಕೆಯಿಂದ ಊರು ಬಿಟ್ಟು ಹೋಗಿದ್ದ 15 ವರ್ಷ ವಯಸ್ಸಿನ ಇಬ್ಬರು ಬಾಲಕರು ಮತ್ತೆ ಮನೆ ಸೇರಿದ ಘಟನೆ ನಡೆದಿದೆ.

ರಾಮನಗರ: ಕ್ರಿಕೆಟರ್ ಆಗುವ ಬಯಕೆಯಿಂದ ಊರು ಬಿಟ್ಟು ಹೋಗಿದ್ದ 15 ವರ್ಷ ವಯಸ್ಸಿನ ಇಬ್ಬರು ಬಾಲಕರು ಮತ್ತೆ ಮನೆ ಸೇರಿದ ಘಟನೆ ನಡೆದಿದೆ.

ನಗರದ ಶಾಂತಿಲಾಲ್ ಲೇಔಟ್ ನ ರಮೇಶ್ ಕುಮಾರ್ , ಸಂಜೀವ್ (ಹೆಸರು ಬದಲಾವಣೆ ಮಾಡಲಾಗಿದೆ) ಎಂಬುವರೇ ಕ್ರಿಕೆಟರ್ ಆಗುವ ಆಸೆಯಿಂದ ಮನೆ ತೊರೆದಿದ್ದವರು.

ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಮೇಶ್ ಕುಮಾರ್ ಮತ್ತು ಸಂಜೀವ್ ಸ್ನೇಹಿತರು. ಇಬ್ಬರಿಗೂ ಕ್ರಿಕೆಟರ್ ಆಗುವ ಬಯಕೆ ಇತ್ತು. ಈ ವಿಚಾರವನ್ನು ಸ್ನೇಹಿತರಲ್ಲಿಯೂ ಹೇಳಿಕೊಂಡಿದ್ದರು.

ಮೇ 31ರಂದು ಇಬ್ಬರು ಮನೆಯಿಂದ ಶಾಲೆಗೆ ತೆರಳಿದ್ದಾರೆ. ತಾಯಿ ಕಬೋಡ್ ಓಪನ್ ಮಾಡಿ ನೋಡಿದಾಗ ಬಟ್ಟೆ ಇಟ್ಟಿರುವ ಜಾಗದಲ್ಲಿ ಪುಸ್ತಕಗಳನ್ನು ಜೋಡಿಸಿ ಬಟ್ಟೆಗಳನ್ನು ಬ್ಯಾಗಿನಲ್ಲಿ ತುಂಬಿಕೊಂಡು ರಮೇಶ್ ಹೋಗಿರುವುದು ಗೊತ್ತಾಗಿದೆ.

ಇದರಿಂದ ಗಾಬರಿಗೊಂಡ ಅವರು ಶಾಲೆಯಲ್ಲಿ ವಿಚಾರಿಸಿದಾಗ ರಮೇಶ್ ತರಗತಿಗೂ ಬಂದಿಲ್ಲವೆಂದು ಶಿಕ್ಷಕರು ಹೇಳಿದ್ದಾರೆ. ಇದೇ ಸಮಯಕ್ಕೆ ಸಂಜೀವ್ ರವರ ತಂದೆ ಕೂಡ ಮಗನನ್ನು ಹುಡುಕಿಕೊಂಡು ಶಾಲೆ ಬಳಿಗೆ ಬಂದಿದ್ದಾರೆ.ಸ್ನೇಹಿತರನ್ನು ವಿಚಾರಿಸಿದಾಗ ನಾನು ಕ್ರಿಕೆಟರ್ ಆಗಬೇಕು. ನನಗೆ ಓದಲು ಇಷ್ಟವಿಲ್ಲ. ನಾನು ಮನೆ ಬಿಟ್ಟು ಹೋಗುತ್ತೇನೆಂದು ಹೇಳುತ್ತಿದ್ದ ಎಂದು ಪೋಷಕರಿಗೆ ತಿಳಿಸಿದ್ದಾರೆ. ತಕ್ಷಣ ತಾಯಿ ಬಾಲಕರು ನಾಪತ್ತೆಯಾಗಿರುವ ಕುರಿತು ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಶಾಲೆಗೆ ಹಾಜರಾಗದೆ ರಾಮನಗರ ತೊರೆದಿದ್ದ ರಮೇಶ್ ಮತ್ತು ಸಂಜೀವ್ ಬಸ್ಸಿನಲ್ಲಿ ಮೈಸೂರಿಗೆ ತೆರಳಿದ್ದಾರೆ. ಅಲ್ಲಿಂದ ಕೇರಳಕ್ಕೆ ತೆರಳಲು ಪ್ಲಾನ್ ಮಾಡಿದ್ದರು. ಮೈಸೂರು ಬಸ್ ನಿಲ್ದಾಣದಲ್ಲಿ ಇರುವಾಗಲೇ ಪೊಲೀಸರು ಪೋಷಕರ ಸಹಕಾರದಿಂದ ಬಾಲಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.