ಕರಾವಳಿಯಲ್ಲಿ ಶೇ.20 ಮಂದಿಯಲ್ಲಿ ಬಿಪಿ, ಶುಗರ್: ಡಾ.ಅಶೋಕ್

| Published : Aug 24 2024, 01:17 AM IST

ಕರಾವಳಿಯಲ್ಲಿ ಶೇ.20 ಮಂದಿಯಲ್ಲಿ ಬಿಪಿ, ಶುಗರ್: ಡಾ.ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ, ಸಿಬ್ಬಂದಿಗೆ, ನ್ಯಾಯವಾದಿಗಳಿಗೆ ಹಾಗೂ ಕಕ್ಷಿದಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕರಾವಳಿ ತೀರ ಪ್ರದೇಶದ ವಾಸಿಗಳ ಆಹಾರ ಪದ್ಧತಿ, ಜೀವನ ಶೈಲಿಯಿಂದ ಶೇ.20ಕ್ಕಿಂತಲೂ ಹೆಚ್ಚು ಜನರಲ್ಲಿ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಕಾಯಿಲೆ ಕಂಡುಬರುತ್ತಿದೆ. ಆದ್ದರಿಂದ ಸರಿಯಾದ ವ್ಯಾಯಾಮವು ಅತೀ ಅಗತ್ಯವಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಶೋಕ್ ಹೇಳಿದರು.ಅವರು ಶುಕ್ರವಾರ, ಜಿಲ್ಲಾ ನ್ಯಾಯಾಲಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ ಹಾಗೂ ಜಿಲ್ಲಾಸ್ಪತ್ರೆ ಅಜ್ಜರಕಾಡು ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ನ್ಯಾಯಾಧೀಶರಿಗೆ, ಸಿಬ್ಬಂದಿಗೆ, ನ್ಯಾಯವಾದಿಗಳಿಗೆ ಹಾಗೂ ಕಕ್ಷಿದಾರರಿಗೆ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಇತ್ತೀಚೆಗೆ ಕರಾವಳಿ ತೀರದ ಜನರು ಹೆಚ್ಚಾಗಿ ಕಚೇರಿ ಕೆಲಸಗಳನ್ನೇ ಮಾಡುವುದರಿಂದ ದೈಹಿಕ ಶ್ರಮ ಕಡಿಮೆಯಾಗುತ್ತಿದೆ‌. ಹೀಗಾಗಿ ವಿವಿಧ ರೋಗಗಳು ಕಾಡುತ್ತಿವೆ. ಕೆಲಸದ ವೇಳೆ ಆಚೆ, ಈಚೆ ನಡೆದರೆ ಅದು ನಡಿಗೆ ಆಗುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ವಾರಕ್ಕೆ 5 ದಿನ 40 ನಿಮಿಷ ನಡೆಯಬೇಕು. ಹೀಗೆ ಶಿಸ್ತಿನ ಜೀವನ ಪದ್ಧತಿ ಅಳವಡಿಸಿಕೊಂಡಾಗ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಇಡಬಹುದು ಎಂದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಕಿರಣ್ ಎಸ್. ಗಂಗಣ್ಣನವರ್ ಶಿಬಿರ ಉದ್ಘಾಟಿಸಿ, ಆರೋಗ್ಯದಲ್ಲಾಗುವ ಬದಲಾವಣೆಗಳನ್ನು ನಿರ್ಲಕ್ಷ್ಯಿಸಬೇಡಿ. ಸಕಾಲದಲ್ಲಿ ವೈದ್ಯರನ್ನು ಸಂಪರ್ಕಿಸಿ. ಅವರು ನೀಡುವ ಸಲಹೆಗಳನ್ನು ಪಾಲಿಸಿ ಎಂದು ವಕೀಲರಿಗೆ ಕಿವಿಮಾತು ಹೇಳಿದರು.ಉಡುಪಿ ವಕೀಲರ ಸಂಘ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು. ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಪುರುಷೋತ್ತಮ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ, ವೈದ್ಯಾಧಿಕಾರಿಗಳಾದ ಡಾ.ಸ್ವಸ್ತಿಕ್, ಡಾ.ಮಾಣಿಕ್ ಉಪಸ್ಥಿತರಿದ್ದರು. ನಟರಾಜ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

-----ಸಹದ್ಯೋಗಿಗಳಿಗಾಗಿ ಶಿಬಿರ ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರು, ಸಿಬ್ಬಂದಿ, ವಕೀಲರು ಅತೀ ಹೆಚ್ಚು ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ನ್ಯಾಯಾಲಯದ ಸಿಬ್ಬಂದಿಯೊಬ್ಬರು ಹಠಾತ್ ಆಗಿ ನಿಧನರಾಗಿದ್ದರು. ಈ ಘಟನೆಯಿಂದ ಮನನೊಂದಿದ್ದ ನ್ಯಾಯಾಧೀಶ ಎಂ.ಪುರುಷೋತ್ತಮ್ ಅವರು, ತನ್ನ ಸಹದ್ಯೋಗಿಗಳು, ಸಿಬ್ಬಂದಿ ವಕೀಲರು ಹಾಗೂ ಕಕ್ಷಿಗಾರರಿಗೆ ವೈದ್ಯಕೀಯ ತಪಾಸಣೆ ಶಿಬಿರ ಏರ್ಪಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಶೋಕ್ ಅಭಿಪ್ರಾಯಪಟ್ಟರು.