ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಚಿಕ್ಕ ಮಕ್ಕಳಿಗೂ ಮಧುಮೇಹ, ರಕ್ತದೊತ್ತಡಂತಹ ಕಾಯಿಲೆ ಬರುತ್ತಿರುವುದು ಆತಂಕಕಾರಿ ವಿಷಯ ಎಂದು ಡಾ. ಚಂದ್ರಮೌಳಿ ಬೇಸರ ವ್ಯಕ್ತಪಡಿಸಿದರು.ಲಯನ್ಸ್ ಸೇವಾ ಸಂಸ್ಥೆ ಮತ್ತು ಆದರ್ಶ ವಿಷನ್ ಕೇರ್ ಇವರ ವತಿಯಿಂದ ಕಣ್ಣಿನ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಶಿಬಿರವನ್ನು ಪಟ್ಟಣದ ಗುರುಪ್ಪ ಗೌಡರ ಬೀದಿಯಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಪೂರ್ವಜರ ಕಾಲದಲ್ಲಿ ವಯಸ್ಸಾದಂತೆ ಕಾಯಿಲೆಗಳು ಬರುವುದು ಸಾಮಾನ್ಯವಾಗಿತ್ತು. ಆದರೆ ಇಂದು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಸಹ ಮಧುಮೇಹ ರಕ್ತದೊತ್ತಡ ಕಾಯಿಲೆಗಳು ಬರುತ್ತಿರುವುದು ಸಾಮಾನ್ಯವಾಗಿದೆ. ಇನ್ನೂ ಕೆಲವರಿಗೆ ತಮ್ಮ ಆರೋಗ್ಯದಲ್ಲಿ ಕಂಡುಬರುವ ರೋಗ ಲಕ್ಷಣಗಳು ತಿಳಿದಿರುವುದಿಲ್ಲ.
ಅಂಥವರು ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಇಲ್ಲಿ ಬಂದು ಪರೀಕ್ಷೆ ಮಾಡಿಸಿದಾಗ ಮಾತ್ರ ಅವರಿಗೆ ತಮ್ಮಲ್ಲಿರುವ ಕಾಯಿಲೆಗಳ ಬಗ್ಗೆ ಮಾಹಿತಿ ದೊರಕುತ್ತದೆ ಎಂದರು. ಮಧುಮೇಹ ಹಾಗೂ ರಕ್ತದ ತಡ ನಿಯಂತ್ರಿಸಲು ನಾವು ಸರಿಯಾದ ವ್ಯಾಯಾಮ, ನಡಿಗೆ, ಆಹಾರ ಪದ್ಧತಿ ಅತ್ಯವಶ್ಯಕವಾಗಿದೆ. ಮೂರು ತಿಂಗಳಿಗೊಮ್ಮೆ ವೈದ್ಯರ ಬಳಿ ತಪಾಸಣೆ ನಡೆಸಿ ಸರಿಯಾದ ಚಿಕಿತ್ಸಾ ತೆಗೆದುಕೊಳ್ಳುವುದರ ಮೂಲಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು. ಮಧುಮೇಹ ಹೆಚ್ಚಾದಂತೆ ಕಣ್ಣಿನ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಆದ್ದರಿಂದ ನಾವು ಇವುಗಳನ್ನು ಪ್ರಾರಂಭದ ಹಂತದಲ್ಲಿ ಸರಿಯಾದ ಚಿಕಿತ್ಸೆ ಮೂಲಕ ತೋರಿಸಿ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಲಯನ್ಸ್ ಸೇವಾಸಂಸ್ಥೆ ವತಿಯಿಂದ ಹಲವಾರು ಉಪಯೋಗ ಶಿಬಿರಗಳನ್ನು ಮಾಡುತ್ತಿದ್ದು, ಶಿಬಿರಗಳಲ್ಲಿ ಅತಿ ಹೆಚ್ಚು ಜನರು ಪಾಲ್ಗೊಂಡು ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.ಲಯನ್ಸ್ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಅಬ್ದುಲ್ ಲತೀಫ್ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಜನರು ಸಾತ್ವಿಕ ಆಹಾರದ ಕಡೆಗೆ ಗಮನ ಕೊಡದೇ ಜಂಕ್‌ಫುಡ್ ಮೊರೆ ಹೋಗುತ್ತಿದ್ದಾರೆ. ಅದರಲ್ಲಿ ವಿಷ ಪದಾರ್ಥಗಳು ರಾಸಾಯನಿಕ ಅಂಶಗಳು ಹೆಚ್ಚಾಗಿದ್ದು, ಇದರಿಂದ ಆಹಾರದಲ್ಲಿ ಏರುಪೇರಾಗಿ ಕಾಯಿಲೆಗಳು ಕೂಡ ಉಂಟಾಗುತ್ತಿದೆ. ಕಣ್ಣಿನ ಪರೀಕ್ಷೆ ರಕ್ತದೊತ್ತಡ ಹಾಗೂ ಮಧುಮೇಹ ಶಿಬಿರವನ್ನು ಆಯೋಜಿಸಿದ್ದು ಇದರ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಆದರ್ಶ ವಿಷನ್ ಕೇರ್‌ನ ಆದರ್ಶ್ ಮಾತನಾಡಿ, ನಾವು ಕಣ್ಣಿನ ದೃಷ್ಟಿಯನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು. ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು. ಸಕ್ಕರೆ ಕಾಯಿಲೆಗಳನ್ನು ನಿಯಂತ್ರಿಸಬೇಕು. ಕಣ್ಣಿನಲ್ಲಿ ದೃಷ್ಟಿ ದೋಷ ಉಂಟಾದರೆ ಕಣ್ಣಿನ ತಪಾಸಣೆಗಾಗಿ ವೈದ್ಯರಲ್ಲಿ ತೋರಿಸಿ ಅದಕ್ಕೆ ಸರಿಯಾದ ಕನ್ನಡಕವನ್ನು ಹಾಕಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸುಮಾರು 200 ಜನ ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡರು. ಈ ವೇಳೆ ಆದರ್ಶ ವಿಷನ್ ಕೇರ್ ವತಿಯಿಂದ 2025ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಸೇವಾಸಂಸ್ಥೆಯ ವೈ. ಬಿ. ಸುರೇಶ್, ಸಂತೋಷ್, ಅಶ್ವತ್ಥ್, ಕೆ.ಎಲ್. ಸುರೇಶ್, ಪ್ರಶಾಂತ್ ಶೆಟ್ಟಿ, ಲ್ಯಾಬ್ ಆದರ್ಶ್, ನೌಷದ್ ಪಾಷಾ, ಕುಮಾರ್, ಶ್ರೀನಿವಾಸ್, ಕಾವೇರಿ ಲ್ಯಾಬ್ ಮೇಘನಾ, ಇತರರು ಇದ್ದರು.