ಸಾರಾಂಶ
ಹುಬ್ಬಳ್ಳಿ: ಯಾವುದೇ ರೀತಿಯ ಪೂರ್ವಾಪರ ಯೋಚನೆಗಳಿಲ್ಲದೇ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಈಗ ಅನ್ನಭಾಗ್ಯ ಯೋಜನೆ ಮುನ್ನಡೆಸಲು ಆಗದಿರುವ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ತನ್ನ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಮಾರ್ಗಕ್ಕೆ ಮುಂದಾಗಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಅಧಿಕಾರಕ್ಕೆ ಬಂದು ಒಂದೂವರೆ ವರ್ಷದ ನಂತರ ಅನರ್ಹ ಕಾರ್ಡ್‌ಗಳಿವೆ ಎಂಬ ಅರಿವು ಸರ್ಕಾರಕ್ಕೆ ಬಂದಿದೆ. ಈಗ ಎಲ್ಲ ಚುನಾವಣೆಗಳು ಮುಗಿದ ಬಳಿಕ ಬಿಪಿಎಲ್ ಕಾರ್ಡ್‌ಗಳಿಗೆ ಕೈ ಹಾಕಿರುವುದು ಗ್ಯಾರಂಟಿ ಯೋಜನೆ ನಿಲ್ಲಿಸುವ ಸೂಚನೆಯಾಗಿದೆ ಎಂದರು.
ವಾಲ್ಮೀಕಿ ಹಗರಣ, ಮುಡಾ ಹಗರಣದ ಸೇರಿದಂತೆ ಇತರೆ ಅವ್ಯವಹಾರಗಳು ರಾಜ್ಯ ಸರ್ಕಾರಕ್ಕೆ ಕೆಟ್ಟು ಹೆಸರು ಬಂದಿದೆ. ಇದನ್ನು ಮರೆಮಾಚುವ ಉದ್ದೇಶದಿಂದಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸರ್ಕಾರವು ಸುಳ್ಳು ಆರೋಪ ಮಾಡುವ ಕೆಲಸ ಆರಂಭಿಸಿದೆ. ಶಾಸಕರ ಖರೀದಿಗೆ ಬಿಜೆಪಿಯಿಂದ ಆಮೀಷವೊಡ್ಡಿದ್ದಾರೆ ಎನ್ನುವ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ಶಾಸಕ ರವಿ ಗಣಿಗ ಮೂಲಕ ಹೇಳಿಸಿದ್ದಾರೆ. ಸರ್ಕಾರದ ಬಳಿ ಈ ಕುರಿತು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಈ ರೀತಿ ವಿಷಯಾಂತರ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶೋಭೆ ತರುವಂತಹದಲ್ಲ ಎಂದು ವಾಗ್ದಾಳಿ ನಡೆಸಿದರು.