ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಆಲೂರುಸಿದ್ದಾಪುರ ಗ್ರಾ.ಪಂ.ಯ 2025-25ನೇ ಸಾಲಿನ ಗ್ರಾಮಸಭೆ ಶುಕ್ರವಾರ ಸಾರ್ವಜನಿಕ ಸಮುದಾಯ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮದಲ್ಲಿ ಉಳ್ಳವರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ನೀಡಿರುವುದಾಗಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ ವಿದ್ಯಮಾನ ನಡೆಯಿತು.ಅಧಿಕಾರಿಗಳು ನಾಗರಿಕ ಸೇವೆ ಮತ್ತು ಆಹಾಯ ಇಲಾಖೆ ನಿರೀಕ್ಷಕಿ ಯಶಸ್ವಿನಿ ಬಿಪಿಎಲ್ ವಿಷಯದ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂದರ್ಭ ಗ್ರಾಮಸ್ಥ ಸಂದೇಶ್ ಆಕ್ಷೇಪ ವ್ಯಕ್ತ ಪಡಿಸಿದರು. ಬಿಪಿಎಲ್ ಬಡವರ್ಗದ ಅರ್ಹ ಫಲಾನುಭವಿಗೆ ದಕ್ಕಬೇಕು ಆದರೆ ಅಧಿಕಾರಿಗಳು ಕೋಟ್ಯಾತರ ರು. ಬೆಲೆ ಬಾಳುವ ಮನೆ ಕಟ್ಟಿಕೊಂಡವರಿಗೆ, ಜಮೀನು ಇದ್ದವರಿಗೆ ವಿತರಣೆ ಮಾಡುತ್ತಾರೆ. ಅರ್ಹ ಫಲಾನುಭವಿಗಳು ವಂಚಿತರಾಗಿದ್ದಾರೆ. ಇದು ಯಾವ ನ್ಯಾಯ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಅಧಿಕಾರಿ ಯಶಸ್ವಿನಿ, ಹಿಂದಿನ ವಿಷಯದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಈಗ ಇಲಾಖೆ ಪರಿಶೀಲನೆ ನಡೆಸಿ ಅರ್ಜಿ ಹಾಕಿದ ಅರ್ಹ ಫಲಾನುಭವಿಗಳಿಗೆ ಮಾತ್ರ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಎಪಿಎಲ್ ಕಾರ್ಡ್‍ದಾರರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂತಹ ಕಾರ್ಡ್ ರದ್ದು ಪಡಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.ಸಾಮಾಜಿಕ ಅರಣ್ಯ ಇಲಾಖೆ ಸಾರ್ವಜನಿಕರು ಸ್ವಂತ ನರ್ಸರಿ ಮಾಡಲು ಪ್ರೋತ್ಸಾಹಿಸುತ್ತಿದೆ. ನರೆಗಾ ಯೋಜನೆ ಮೂಲಕ ನರ್ಸರಿ ಮಾಡಬಹುದು ಎಂದು ಇಲಾಖೆಯ ಯೋಜನೆಗಳ ಬಗ್ಗೆ ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಭವ್ಯ ಮಾಹಿತಿ ನೀಡಿದರು.ಈ ವೇಳೆ ಗ್ರಾಮಸ್ಥ ಮಹೇಶ್ ನಿಮ್ಮ ಇಲಾಖೆಯಿಂದ ನರ್ಸರಿ ಮಾಡಿ ಗ್ರಾಮಸ್ಥರಿಗೆ ವಿತರಿಸಿದರೆ ಗ್ರಾಮಸ್ಥರಿಗೆ ಉಪಯೋಗವಾಗುತ್ತದೆ ಎಂದರು. ಮಧ್ಯಪ್ರವೇಶಿಸಿದ ಪಿಡಿಒ ಹರೀಶ್, ಗ್ರಾ.ಪಂ. ನರೆಗಾ ಮೂಲಕ ಗ್ರಾಮಸ್ಥರು ಸ್ವಂತ ನರ್ಸರಿ ಮಾಡಲು ಪ್ರೋತ್ಸಾಹಿಸುತ್ತಿದೆ ಎಂದರು.
ಕಂದಾಯ ಇಲಾಖೆ ಈಗ ಆಧುನಿಕ ತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಸರಳವಾಗಿ ಸೇವೆ ನೀಡುತ್ತಿದೆ. ಹಿಂದಿನಂತೆ ಕಡತ ವಿಲೆವಾರಿ ತಡವಾಗುತ್ತಿಲ್ಲ ಎಂದು ಕಂದಾಯ ಇಲಾಖೆಯ ಸೇವೆ ಸೌಲಭ್ಯಗಳು, ಸಿ ಎಂಡ್ ಲ್ಯಾಂಡ್ ಮುಂತಾದ ಜಮೀನುಗಳಿಗೆ ಸಂಬಂಧ ವಿಷಯಗಳ ಬಗ್ಗೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ವಾಣಿ ಮಾಹಿತಿ ನೀಡಿದರು.ಆಲೂರುಸಿದ್ದಾಪುರ ಆಸ್ಪತ್ರೆ ವೈದ್ಯಾದಿಕಾರಿ ಡಾ.ಸುಪರ್ಣ ಮಾಹಿತಿ ನೀಡಿ, ಸಾಂಕ್ರಾಮಿಕ ಕಾಯಿಲೆಗಳು ಬಾರದಂತಾಗಲು ಪ್ರತಿಯೊಬ್ಬರೂ ತಮ್ಮ ಮನೆ ಪರಿಸರದಲ್ಲಿ ಸ್ವಚ್ಛತೆ ಸೇರಿದಂತೆ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು.
ಉಪ ಅರಣ್ಯ ವಲಯಾಧಿಕಾರಿ ಸೂರ್ಯ, ಕೃಷಿ ಅಧಿಕಾರಿ ಸೋಮಣ್ಣ, ಚೆಸ್ಕಾಂ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ನೋಡಲ್ ಅಧಿಕಾರಿ ಜಿ.ಎಂ.ಹೇಮಂತ್ ಕಾರ್ಯನಿರ್ವಹಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಚಂದ್ರಮೋಹನ್, ಸದಸ್ಯರು, ಪಿಡಿಒ ಹರೀಶ್, ಗ್ರಾ.ಪಂ.ಸಿಬ್ಬಂದಿ ಹಾಜರಿದ್ದರು.