ಬೆಳ್ತಂಗಡಿ: ಉಜಿರೆ ಜನಾರ್ದನ ಸ್ವಾಮಿಯ ಬ್ರಹ್ಮಕಲಶೋತ್ಸವ ಅಭೂತಪೂರ್ವ ಯಶಸ್ಸು ಕಂಡಿದ್ದು, ಊರಿನ ಪ್ರತಿಯೊಬ್ಬರೂ ದೇವರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.

ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನ ಬ್ರಹ್ಮರಥ ಹಾಗೂ ಪುಷ್ಪರಥ ಸಮರ್ಪಣೆ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ ವಿಜಯಗೋಪುರ ನಿರ್ಮಾಣ ಸಮಿತಿ ಹಾಗು ಬ್ರಹ್ಮ ಕಲಶೋತ್ಸವ ಸಮಿತಿಯ ವಿವಿಧ ಸಂಚಾಲಕರು, ಸಹಸಂಚಾಲಕರು ಹಾಗೂ ಸರ್ವ ಸದಸ್ಯರು ಮತ್ತು ಶ್ರಮಸೇವೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸುವ ಧನ್ಯೋಸ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ ಉಜಿರೆಯ ಬ್ರಹ್ಮಕಲಶೋತ್ಸವ ಇತಿಹಾಸ ನಿರ್ಮಿಸಿ ತಾಲೂಕು, ಜಿಲ್ಲೆಗೆ ಮಾದರಿಯಾಗಿದೆ. ತನಗೆ ವಿಜಯಗೋಪುರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟವರು ಕೀರ್ತಿಶೇಷ ವಿಜಯರಾಘವ ಪಡುವೆಟ್ನಾಯರು. ಇಂಜಿನಿಯರ್ ಗಣೇಶ್ ಗೌಡ ಲಾಭವಿಲ್ಲದೆ ವಿಜಯಗೋಪುರವನ್ನು ಸುಂದರವಾಗಿ ನಿರ್ಮಿಸಿಕೊಟ್ಟಿದ್ದಾರೆ ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಶರತ್ ಕೃಷ್ಣ ಪಡುವೆಟ್ನಾಯರು ಗ್ರಾಮದ 45೦೦ ಮನೆಗಳಿಗೆ ತೆರಳಿ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಬ್ರಹ್ಮ ಕಲಶೋತ್ಸವ ನಭೂತೋ ನ ಭವಿಷ್ಯತಿ ಎಂಬಂತೆ ದಾಖಲಿಸಲ್ಪಟ್ಟಿದೆ ಎಂದರು. ಪ್ರಧಾನ ಸಂಚಾಲಕ ಕೆ.ಮೋಹನ್ ಕುಮಾರ್ ಮಾತನಾಡಿ ಜವಾಬ್ದಾರಿ ವಹಿಸಿಕೊಂಡು 145 ದಿನ ನಿರಂತರ ಕೆಲಸ ಮಾಡಿರುವುದು ಸಂತೋಷ ತಂದಿದೆ. ಬ್ರಹ್ಮಕಲಶೋತ್ಸವದಲ್ಲಿ ಶ್ರಮದಾನ ಮಾಡಿದವರ ಸೇವೆ ಅವಿಸ್ಮರಣೀಯ. ತೆರೆಯ ಹಿಂದಿನ ಶಕ್ತಿಯಾಗಿ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ, ಹರ್ಷೇಂದ್ರ ಕುಮಾರ್‌ ಅವರ ಅಶೀರ್ವಾದದಿಂದ ಧರ್ಮಯಾನ ಐತಿಹಾಸಿಕ ದಾಖಲೆಯಾಗಲು ಸಾಧ್ಯವಾಯಿತು ಎಂದರು.


ಸನ್ಮಾನ: ಸುಪ್ರಸಾದ ಅನ್ನಛತ್ರದ ಸಂಚಾಲಕ ಅರುಣಕುಮಾರ್ ತಮ್ಮ ಅನುಭವ ಹಂಚಿಕೊಂಡರು. ಸುರುಚಿ ಪಾಕಶಾಲೆಯಲ್ಲಿ ಅಡುಗೆ ಸಿದ್ಧಪಡಿಸಿದ ಪಾಕತಜ್ಞ ರವಿ ಭಟ್ ಕುಂಟಿನಿ ದಂಪತಿಯನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.

ಶ್ರೀ ಜನಾರ್ದನ ಸ್ವಾಮಿಯ ಭಾವಚಿತ್ರವನ್ನು ಸಮರ್ಪಿಸಿದ ಕಲಾವಿದ ಯಾದವ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಮಿತಿ ಕೋಶಾಧಿಕಾರಿಗಳಾದ ಲಕ್ಷ್ಮಣ ಸಫಲ್ಯ ಮತ್ತು ರಾಜೇಶ್ ಪೈ, ಕಾರ್ಯದರ್ಶಿ ಭರತ್ ಕುಮಾರ್, ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ , ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಇದ್ದರು.

ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಪ್ರಸ್ತಾವಿಸಿ, ಊರಿನ ಭಕ್ತ ಜನರ ಭಕ್ತಿ,ಶ್ರಮ, ಭಾವನೆ ವ್ಯಕ್ತವಾಗಿ ಇಡೀ ರಾಜ್ಯ ತಿರುಗಿ ನೋಡುವಂತೆ ಮಾಡಿದೆ ಎಂದರು.

ಎಸ್ ಡಿ ಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಧರ ಭಟ್ ನಿರೂಪಿಸಿದರು. ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಸ್ವಾಗತಿಸಿ, ಸಹಕೋಶಾಧಿಕಾರಿ ಸಂಜೀವ ಶೆಟ್ಟಿ ಕುಂಟಿನಿ ವಂದಿಸಿದರು.