ಹೂವಿನಹಡಗಲಿ: ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಜಾರಿಗೆ ತರಲು ಮುಂದಾಗಿರುವ, ಶಾಲಾ ವಿಲೀನ ಯೋಜನೆಯನ್ನು ಖಂಡಿಸಿ, ಇಲ್ಲಿನ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಪಟ್ಟಣದ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಬಸವರಾಜ ಸಂಶಿ, ರಾಜ್ಯ ಸರ್ಕಾರದ ಈ ಯೋಜನೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದುರ್ಬಲಗೊಳಿಸುವುದರ ಜೊತೆಗೆ, ಗ್ರಾಮೀಣ ಬಡ ಮಕ್ಕಳ ಶಿಕ್ಷಣ ಹಕ್ಕಿನ ಮೇಲೆ ಗಂಭೀರ ಹಲ್ಲೆಯಾಗಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಹಳ್ಳಿಗಳಲ್ಲಿ, ಕಾರ್ಯನಿರ್ವಹಿಸುವ ಶಾಲೆಗಳು ಮುಚ್ಚುವ ಅಪಾಯ ಎದುರಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಹತ್ತಿರದಲ್ಲಿದ್ದ ನೆರೆ ಹೊರೆಯ ಶಾಲೆಗಳು ಇಲ್ಲವಾಗುವುದರಿಂದ, ಮಕ್ಕಳು ದೂರದ ಶಾಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸುರಕ್ಷತೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಜೊತೆಗೆ ಶಾಲಾ ಗೈರುಹಾಜರಿ ಹಾಗೂ ಶಿಕ್ಷಣ ಮಧ್ಯದಲ್ಲೇ ಬಿಟ್ಟುಕೊಡುವವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಮ್ಯಾಗ್ನೆಟ್ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುವ ಸಾರಿಗೆ ಹೊಣೆಗಾರಿಕೆಯನ್ನು, ಪೋಷಕರ ಮೇಲೇ ಹಾಕಿರುವ ಸರ್ಕಾರದ ನಿರ್ಧಾರವನ್ನು ಅವರು, ತೀವ್ರವಾಗಿ ಟೀಕಿಸಿದರು. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಇದು ಹೆಚ್ಚುವರಿ ಭಾರವಾಗಲಿದೆ ಎಂದು ಹೇಳಿದರು.ಸಂಘಟನೆಯ ವಿರೂಪಾಕ್ಷ ಅಂಕ್ಲಿ, ವೆಂಕಟೇಶ ನಾಯ್ಕ ಮಾತನಾಡಿ, ಈ ಯೋಜನೆ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಹಂತ ಹಂತವಾಗಿ, ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‌ಆರ್ ನಿಧಿಗಳನ್ನು ಬಳಸುವುದು, ಮತ್ತು ಶಾಲಾ ನಿರ್ವಹಣೆಯನ್ನು ಹೊರಗುತ್ತಿಗೆ ನೀಡುವುದು ಶಿಕ್ಷಣ ಕ್ಷೇತ್ರವನ್ನು ವಾಣಿಜ್ಯೀಕರಣಗೊಳಿಸುವ ದಾರಿಗೆ ದೂಡುತ್ತಿದೆ ಎಂದು ದೂರಿದರು.ರಾಜ್ಯದಲ್ಲಿ ಈಗಾಗಲೇ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅನೇಕ ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳ ಕೊರತೆಯಿಂದ ಸಂಕಷ್ಟದಲ್ಲಿವೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು ಸರ್ಕಾರ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಅತ್ಯಂತ ವಿಷಾದನೀಯ ಎಂದರು.
ಕೂಡಲೇ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯಬೇಕು, ಎಲ್ಲಾ ಸರ್ಕಾರಿ ಶಾಲೆಗಳಿಗೆ ಅಗತ್ಯ ಶಿಕ್ಷಕರು ಮತ್ತು ಮೂಲಸೌಕರ್ಯ ಒದಗಿಸಬೇಕು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು, ಪ್ರತಿಯೊಂದು ಹಳ್ಳಿಯಲ್ಲೂ ನೆರೆಹೊರೆಯ ಶಾಲಾ ವ್ಯವಸ್ಥೆಯನ್ನು ಬಲಪಡಿಸಬೇಕು, ಗ್ರಾಮೀಣ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್, ಕಂಪ್ಯೂಟರ್ ಶಿಕ್ಷಣ, ಪ್ರಯೋಗಾಲಯ ಹಾಗೂ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಎಸ್‌ಎಫ್‌ನ ತಾಲೂ ಅಧ್ಯಕ್ಷ ವಿರೂಪಾಕ್ಷ ಅಂಕ್ಲಿ, ಕಾರ್ಯದರ್ಶಿ ವೆಂಕಟೇಶ ನಾಯ್ಕ, ಸಂಘಟನೆಯ ಮುಖಂಡರಾದ ತರುಣ್, ವಿಕಾಸ, ಬಸವರಾಜ, ಎಸ್‌ಡಿಎಂಸಿ ಸದಸ್ಯರಾದ ಸುಲೇಮಾನ್, ರಾಜಕುಮಾರ, ಗಿರಿ, ಪ್ರಕಾಶ, ಹಣ್ಣಿನ ವೀರೇಶ, ಎಐವೈಎಫ್‌ನ ಬಸವರಾಜ ಸಂಶಿ, ಎಐಕೆಎಸ್‌ನ ಮುಕುಂದಗೌಡ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಜಂಗ್ಲಿ ಸಾಬ್ ಸೇರಿದಂತೆ ಇತರರು ಕಂದಾಯ ಇಲಾಖೆಯ ಸಲೀಂ ಅವರಿಗೆ ಮನವಿ ಸಲ್ಲಿಸಿದರು.