ಉಡುಪಿ: ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ನಾಗರಿಕನು ತನ್ನ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಪರಿಶೀಲಿಸಿಕೊಳ್ಳುವ ಕಾಲ ಬಂದಿದೆ, ಈಗ ದಾಖಲೆ ಪರಿಶೀಲನೆ ಎಂಬ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸುವ ಕೆಲಸ ನಡೆಯುತ್ತಿದೆ, ಆದ್ದರಿಂದ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ) ಅಧಿನಿಯಮದ ಬಗ್ಗೆ ಜಾಗೃತರಾಗಿರಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.ಸರ್ಕಾರದ ಅನುದಾನದಿಂದ ನಡೆಯುವ ಯೋಜನೆಗಳನ್ನು ಬಿಜೆಪಿ ಮುಖಂಡರು ತಮ್ಮ ಪಕ್ಷದ ನೇತೃತ್ವದ ನಡೆಯುವ ಕಾರ್ಯಕ್ರಮ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಜನತೆ ಎಚ್ಚರವಾಗಿರಬೇಕು. ಶೀಘ್ರವೇ ಜಿಪಂ ತಾಪಂ ಚುನಾವಣೆಗಳು ನಡೆಯಲಿರುವುದರಿಂದ ಪಕ್ಷದಿಂದ ನಿಯೋಜಿತ ಬೂತ್ ಮಟ್ಟದ ಏಜೆಂಟರು ಎಸ್‌ಐಆರ್ ಬಗ್ಗೆ ತಿಳಿದುಕೊಂಡು ಮತದಾರರಿಗೆ ಮಾಹಿತಿ ನೀಡಬೇಕು ಎಂದವರು ಹೇಳಿದರು.ಪಕ್ಷದ ಪ್ರಮುಖರಾದ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ ಕೇಂದ್ರ ಸರ್ಕಾರವು ಎಸ್‌ಐಆರ್ ಹೆಸರಲ್ಲಿ ಮತದಾನದ ಹಕ್ಕನ್ನು ಕಸಿಯುವ ಯೋಜನೆ ರೂಪಿಸಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇದೆಯೇ ಎಂಬುವುದನ್ನು ಪರಿಶೀಲಿಸುವುದು ಅಗತ್ಯ ಎಂದರು ˌ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗಡೆ ಕೋಳ್ಕೆಬೈಲ್, ಮುಖಂಡರಾದ ಮಲ್ಯಾಡಿ ಶಿವರಾಂ ಶೆಟ್ಟಿ, ರಾಜು ಪೂಜಾರಿ ಉಪಸ್ಥಿತರಿದ್ದರು.ಪಕ್ಷಕ್ಕಾಗಿ ದುಡಿದು ಇತ್ತಿಚೆಗೆ ನಿಧನರಾದ ಮುಖಂಡರಿಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ನುಡಿನಮನ ಸಲ್ಲಿಸಿದರು. ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ ಸ್ವಾಗತಿಸಿ, ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು, ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು.