ಕನ್ನಡಪ್ರಭ ವಾರ್ತೆ ಮಡಿಕೇರಿ
ಕೇಂದ್ರ ಸರ್ಕಾರ ಏಕಾಏಕಿ ಗೃಹ ಬಳಕೆ ಮತ್ತು ವಾಣಿಜ್ಯ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಮಡಿಕೇರಿ ನಗರ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಇಂದಿರಾ ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ನೂರಾರು ಕಾರ್ಯಕರ್ತರು ಗ್ಯಾಸ್ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ, ಬಿಜೆಪಿ ಆಡಳಿತ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ವಿರುದ್ದ ಧಿಕ್ಕಾರ ಕೂಗಿ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದರು.
ನಗರ ಕಾಂಗ್ರೆಸ್ ಪ್ರಕಾಶ್ ಆಚಾರ್ಯ ಮಾತನಾಡಿ, ಗ್ಯಾಸ್ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ. ಗ್ಯಾಸ್ ಬೆಲೆ ಇಳಿಸುವವರೆಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 430 ಇದ್ದ ಗ್ಯಾಸ್ ಬೆಲೆ ಇಂದು ಸಾವಿರದ ಸನಿಹಕ್ಕೆ ತಲುಪಿದ್ದು ಇದು ನರೇಂದ್ರ ಮೋದಿಯವರ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.
ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಬಿಜೆಪಿಯವರು ಸುಳ್ಳು ಹೇಳುತ್ತಲೇ ರಾಜಕಾರಣ ಮಾಡುತ್ತಿದ್ದಾರೆ.
ಸ್ಥ ಳೀಯ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದರೂ ವಿನಾ ಕಾರಣ ಟೀಕೆ ಮಾಡುತ್ತಾರೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರ ಮೈನಾ ಮಾತನಾಡಿ, ಗ್ಯಾಸ್ ಬೆಲೆ ಏರಿಕೆಗೆ ಕೊಲ್ಲಿ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ದದ ನೆಪ ಹೇಳುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಹಿಂದೆ 2003ರಿಂದ 2011ರವರೆಗೆ ಅಮೆರಿಕಾ ಮತ್ತು ಇರಾಕ್ ನಡುವೆ ಯುದ್ದ ನಡೆದಿತ್ತು. ಆಗಲೂ ಇದೇ ಪರಿಸ್ಥಿತಿ ಇತ್ತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಜಾಣ್ಮೆ ಮತ್ತು ಕೌಶಲ್ಯಪೂರ್ಣ ಆಡಳಿತ ಮೂಲಕ ಯುದ್ದದ ಬಿಸಿ ದೇಶದ ಜನತೆಗೆ ತಟ್ಟದ ಹಾಗೆ ಎಚ್ಚರ ವಹಿಸಿದ್ದರು. ಪೆಟ್ರೋಲ್ ಬೆಲೆ ಲೀಟರ್‌ಗೆ 65 ರು. ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ 450 ರು. ಆಸುಪಾಸಿನಲ್ಲಿ ಇರುವಂತೆ ಮಾಡಿ ದೇಶದ ನಾಗರಿಕರ ಹಿತ ಕಾಪಾಡಿದ್ದರು. ಆದರೆ ಈಗ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರಯಾವುದೇ ಆಡಳಿತಾತ್ಮಕ ಪ್ರಯತ್ನ ಮಾಡದೆ ಜನರ ಮೇಲೆ ಬೆಲೆ ಏರಿಕೆ ಬರೆ ಹಾಕಿ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರ ಮೂಲಕ ಗ್ಯಾಸ್ ದರ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ನೀಡಲಾಯಿತು.ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಶಶಿ, ಮಡಿಕೇರಿ ನಗರಸಭೆ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ,
ಜಿ.ಸಿ. ಜಗದೀಶ್, ಯಾಕುಬ್, ಜುಲೇಕಾ ಬಿ., ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಪತ್ ರಾಜ್, ಚೇತನ್, ಸೇವಾ ದಳದ ಅಧ್ಯಕ್ಷರಾದ ಕಾನೆಹಿತ್ಲು ಮೊಣ್ಣಪ್ಪ,ಕಾರ್ಮಿಕ ಘಟಕದ ಅಧ್ಯಕ್ಷರಾದ ದಿನೇಶ್, ಪ್ರಮುಖರಾದ ಅಂಬೇಕಲ್ ನವೀನ್, ಸುದಯ್ ನಾಣಯ್ಯ, ಕಲೀಲ್ ಬಾ಼ಷಾ, ಕೆ.ಜೆ. ಪೀಟರ್, ಜಾನ್ಸನ್ ಪಿಂಟೋ, ಮೀನಾಜ್ ಪ್ರವೀಣ್ , ಆರ್.ಪಿ. ಚಂದ್ರಶೇಖರ್, ಫ್ಯಾನ್ಸಿ ಪಾರ್ವತಿ, ಮಮ್ತಾಜ್ ಬೇಗಂ, ಪ್ರೇಮಾ ಕೃಷ್ಣಪ್ಪ, ಪ್ರೇಮಾ ಲಿಂಗಪ್ಪ, ಅರ್ಜುನ್, ಮುನೀರ್ ಮಾಚರ್, ಸಹ ಕಾರ್ಯದರ್ಶಿ ಜಾಕೀರ್ ಹುಸೇನ್ ಸಹಿತ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸಹಿತ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.