ಉತ್ತಮ ಸಂಸ್ಕಾರದಿಂದ ಬ್ರಹ್ಮ ತೇಜಸ್ಸು: ಸತ್ಯಪ್ರಿಯ ಕಲ್ಲೂರಾಯ

| Published : Apr 16 2024, 01:05 AM IST

ಸಾರಾಂಶ

ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಸೋಮವಾರ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ಏ.30ರ ವರೆಗೆ 15 ದಿನಗಳ ವಸಂತ ವೇದ ಪಾಠ ಶಿಬಿರ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವಾಲ್ಮೀಕಿ, ವೇದವ್ಯಾಸರು ಬ್ರಾಹ್ಮಣ ಕುಲದಲ್ಲಿ ಜನಿಸಿದವರಲ್ಲ. ಅವರು ಉನ್ನತ ವೇದ ಶಿಕ್ಷಣ ಪಡೆದು ಬ್ರಾಹ್ಮಣತ್ವ ಪಡೆದಿದ್ದಾರೆ. ಉತ್ತಮ ಸಂಸ್ಕಾರದಿಂದ ಬ್ರಹ್ಮತೇಜಸ್ಸು ಹೊಂದಿದವರನ್ನು ಬ್ರಾಹ್ಮಣರೆನ್ನುತ್ತಾರೆ. ಬ್ರಹ್ಮೋಪದೇಶದ ಗಾಯತ್ರಿ ಮಂತ್ರ ಅನುಷ್ಠಾನ ಮಾಡಿದರೆ ಅವರ ಮುಂದಿನ ಜೀವನ ಉತ್ತಮ ರೀತಿಯಲ್ಲಿ ನಡೆಯುತ್ತದೆ ಎಂದು ಶ್ರೀ ಕ್ಷೇತ್ರ ಸೌತಡ್ಕದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಹೇಳಿದರು.

ಅವರು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಸೋಮವಾರ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ಏ.30ರ ವರೆಗೆ ಆಯೋಜಿಸಲಾದ 15 ದಿನಗಳ ವಸಂತ ವೇದ ಪಾಠ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಯ ಶಿಕ್ಷಣದ ಜತೆಗೆ ಧಾರ್ಮಿಕ ವಿದ್ಯೆ ಕಲಿತರೆ ಅದು ಮುಂದಿನ ದಿನಗಳಲ್ಲಿ ಪ್ರಯೋಜನಕಾರಿಯಾಗುವುದು. ವೇದ ಗೌಪ್ಯವಾಗಿದ್ದರೆ ಅದಕ್ಕೆ ಶ್ರೇಷ್ಠ ಸ್ಥಾನವಿದೆ. ಅದು ಪ್ರತಿಯೊಬ್ಬರ ಕೈಗೆ ಬಂದಾಗ ಅದರ ಮೌಲ್ಯ ಕ್ಷೀಣಿಸುತ್ತದೆ. ಹೆತ್ತವರು ಮಕ್ಕಳಿಗೆ ಯಾವ ಸಮಯದಲ್ಲಿ ಯಾವ ಉಪದೇಶ ಕೊಡಬೇಕೆಂಬುದನ್ನು ತಿಳಿದು ಹೇಳಬೇಕು ಎಂದರು.

ಬೆಂಗಳೂರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಶೇಷ ಜೋಶಿ ಶಿಬಿರದ ಮೂವರು ಗುರುಗಳು 15 ದಿನಗಳಲ್ಲಿ ಒಂದು, ಎರಡು ಹಾಗೂ ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ, ಸ್ತೋತ್ರಗಳು, ದೇವ ಪೂಜಾ ಪದ್ಧತಿ, ಶ್ಲೋಕಗಳ ಕುರಿತು ಮಾಹಿತಿ ನೀಡುವರು.

ಶಿಬಿರದ ಪಾಲಕ ವಿಠಲ ಅಮ್ಮಿಣ್ಣಾಯ, ಶಿಬಿರದ ದಿನಚರಿ ಬಗೆಗೆ ಮಾಹಿತಿ ನೀಡಿ, ಶಿಬಿರದಲ್ಲಿ ಧಾರ್ಮಿಕ ಶಿಕ್ಷಣದ ಜತೆಗೆ ಜೀವನ ಶಿಕ್ಷಣ ಕಲಿಸಿಕೊಡಲಾಗುವುದು ಎಂದರು.

ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದ ಗುರುಗಳಾದ ಪೂರ್ಣಪ್ರಜ್ಞ ಆಚಾರ್, ಹೃಷಿಕೇಶ್, ಉಜಿರೆ ವಲಯ ಕಾರ್ಯದರ್ಶಿ ಹರ್ಷಕುಮಾರ್ ಕೆದಿಲಾಯ ಉಪಸ್ಥಿತರಿದ್ದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ, ಪ್ರಸ್ತಾವಿಸಿದರು. ಉಪಾಧ್ಯಕ್ಷ ಮುರಳಿಕೃಷ್ಣ ಆಚಾರ್ ನಿರೂಪಿಸಿದರು. ಜನಾರ್ದನ ತೋಳ್ಪಡಿತ್ತಾಯ ವಂದಿಸಿದರು.

ವಸಂತ ವೇದ ಪಾಠ ಶಿಬಿರದಲ್ಲಿ ಜಿಲ್ಲಾದ್ಯಂತದಿಂದ 7೦ಕ್ಕೂ ಹೆಚ್ಚು ಸಮಾಜದ ವಟುಗಳು ಭಾಗವಹಿಸುತ್ತಿದ್ದಾರೆ.