ಮಂಗಳೂರು: ಗಡಿನಾಡು ಕಾಸರಗೋಡಿನ ಪ್ರಸಿದ್ಧ ಮೊಸಳೆ ಸರೋವರ ಕ್ಷೇತ್ರ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯಲ್ಲಿ 2027ರ ಫೆ. 23 ರಿಂದ 28 ರ ತನಕ ನವೀಕರಣ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದೇ ಸಂದರ್ಭ ಅತ್ಯಪೂರ್ವ ತೆಪ್ಪೋತ್ಸವ ಕೂಡ ಪುನರಾರಂಭಗೊಳ್ಳಲಿದೆ.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭಾನುವಾರ ಶ್ರೀ ಕ್ಷೇತ್ರ ಅನಂತಪುರದ ಅನಂತಶ್ರೀ ಸಭಾಭವನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಮಿತಿ ಘೋಷಣಾ ಮಹಾಸಭೆಯಲ್ಲಿ ಇದನ್ನು ಘೋಷಿಸಿದರು.ಮಹಾಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದ ಎಡನೀರು ಶ್ರೀಗಳು, ದೇಶದ ಎಲ್ಲೇ ಆಗಲಿ ಕಾಸರಗೋಡಿನ ಪ್ರಸ್ತಾಪ ಬಂದಾಗ ಮೊಸಳೆ ಮತ್ತು ಸರೋವರ ಕ್ಷೇತ್ರದ ಉಲ್ಲೇಖ ಬಂದೇ ಬರುತ್ತದೆ. ಶ್ರೀ ಕ್ಷೇತ್ರ ನಮ್ಮ ನಾಡಿನ ಅಭಿಮಾನ ಮತ್ತು ಹೆಮ್ಮೆಯ ಸಂಕೇತ. ಇಲ್ಲಿನ ಬ್ರಹ್ಮಕಲಶ ದಿನಾಂಕ ಘೋಷಣಾ ಸಭೆಯಲ್ಲೇ ಇಷ್ಟೊಂದು ಸಂಖ್ಯೆಯ ಭಕ್ತ ಜನರು ಆಸಕ್ತಿಯಿಂದ ಸೇರಿದ್ದಾರೆ ಎಂದರೆ ಇದು ಬ್ರಹ್ಮಕಲಶದ ಮಹಾ ಯಶಸ್ಸಿನ ಸಂಕೇತ ಎಂದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳನ್ನು ಘೋಷಿ ಆಶೀರ್ವಚನ ನೀಡಿ, ಹೇಗೆ ಕ್ಷೇತ್ರಕ್ಕೆ ಬ್ರಹ್ಮಕಲಶ ನಡೆಯುತ್ತದೋ ಹಾಗೆಯೇ ದೇಹವೆಂಬ ದೇವಾಲಯ ಹೊತ್ತ ನಮ್ಮೆಲ್ಲರೊಳಗೂ ಬ್ರಹ್ಮಕಲಶ ನಡೆಯುತ್ತಲೇ ಇರಬೇಕು ಎಂದರು.

ಲಾಂಛನ ಬಿಡುಗಡೆ: ಬ್ರಹ್ಮಕಲಶೋತ್ಸವದ ಲಾಂಛನವನ್ನು ಮಹಾಪೋಷಕ ದಾನಿ, ಮುಂಡಪಳ್ಳ ರಾಜರಾಜೇಶ್ವರಿ ಕ್ಷೇತ್ರದ ಮೊಕ್ತೇಸರ, ಉದ್ಯಮಿ ಕೆ. ಕೆ. ಶೆಟ್ಟಿ ಬಿಡುಗಡೆ ಮಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ. ವಸಂತ ಪೖೆ ಬದಿಯಡ್ಕ ಅಧ್ಯಕ್ಷತೆ ವಹಿಸಿದರು. ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಗೌರವ ಮೊಕ್ತೇಸರ ಶ್ರೀಕೃಷ್ಣಯ್ಯ ಅನಂತಪುರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಾಧವ ಕಾರಂತ, ಜಿ.ಪಂ. ಸದಸ್ಯರಾದ ಸೋಮಶೇಖರ ಜೆ. ಎಸ್, ರಾಮಪ್ಪ ಮಂಜೇಶ್ವರ, ಉದ್ಯಮಿ ಮಧುಸೂದನ ಆಯರ್, ಧಾರ್ಮಿಕ ಮುಂದಾಳು ಮಂಜುನಾಥ ಆಳ್ವ, ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕುಶಲಪ್ಪ ಪೂಜಾರಿ ಕಣ್ಣೂರು,

ಜನಪ್ರತಿನಿಧಿಗಳಾದ ಪೃಥ್ವಿರಾಜ್ ಶೆಟ್ಟಿ, ಸುಖೇಶ್ ಭಂಡಾರಿ, ಅಜಿತ್ ಕುಮಾರ, ಶಾರದಾ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ, ಅನಂತಪುರ ವಾರ್ಡ್‌ ಪ್ರತಿನಿಧಿ ಸತೀಶ ಮತ್ತಿತರರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಪೆರ್ಣೆ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಸತ್ಯ ಶಂಕರ ಅನಂತಪುರ ನಿರೂಪಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ವಿಜಯ ಭಟ್, ಶುಭಾ ಭಟ್ ದೇವಸ್ಯ ಪ್ರಾರ್ಥನೆ ಹಾಡಿದರು.ಮತ್ತೆ ತೆಪ್ಪೋತ್ಸವ ಆರಂಭ: ಸರೋವರ ಕ್ಷೇತ್ರ ಶ್ರೀ ಅನಂತಪುರದಲ್ಲಿ ಈ ಬ್ರಹ್ಮಕಲಶೋತ್ಸವದೊಂದಿಗೆ ಮತ್ತೆ ತೆಪ್ಪೋತ್ಸವ ಆರಂಭವಾಗಲಿದೆ. ಹಿಂದಿನ ಕಾಲದಲ್ಲಿ ಅನಂತಪುರದ ವಾರ್ಷಿಕ ಜಾತ್ರೆಯಂದು ದೇವರು ತೆಪ್ಪದಲ್ಲಿ ಕ್ಷೇತ್ರಕ್ಕೆ ಪ್ರದಕ್ಷಿಣೆ ಬರುವುದು ಮತ್ತೆಲ್ಲೂ ಕಾಣದ, ಬೇರೆಲ್ಲೂ ಇಲ್ಲದ ಅತ್ಯಪೂರ್ವ ವಿಸ್ಮಯಕರ ದೃಶ್ಯಾವಳಿಯಾಗಿತ್ತು. ಕಾರಣಾಂತರ ಸ್ಥಗಿತಗೊಂಡು, ಪುನರಪಿ ಆರಂಭವಾಗುವ ಅನಂತಪುರ ತೆಪ್ಪೋತ್ಸವ ಶ್ರೀ ಕ್ಷೇತ್ರ ಜಾತ್ರೆಯ ಅತ್ಯಂತ ವಿಶೇಷ ಆಕರ್ಷಣೆಯಾಗಲಿದೆ.