ಸಾರಾಂಶ
ಬಾದಾಮಿ: ಕುಳಗೇರಿ ಕ್ರಾಸ್ ಮಲಪ್ರಭಾ ತಟದಲ್ಲಿರುವ ಸುಕ್ಷೇತ್ರ ಗೋವನಕೊಪ್ಪ ಬ್ರಹ್ಮಾನಂದ ಪರಮಹಂಸ ೮೬ನೇ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಶನಿವಾರ ನೆರವೇರಿತು. ಆರತಿ, ಕುಂಭ ಹೊತ್ತ ಮಹಿಳೆಯರ ಸಾಲು, ಸಕಲ ವಾದ್ಯಗಳೊಂದಿಗೆ ಸುಂದರವಾಗಿ ಅಲಂಕಾರಗೊಂಡಿದ್ದ ರಥ ಎಳೆದು ಭಕ್ತರು ಧನ್ಯತಾಭಾವ ಮೆರೆದರು.
ಕನ್ನಡಪ್ರಭ ವಾರ್ತೆ ಬಾದಾಮಿ
ಕುಳಗೇರಿ ಕ್ರಾಸ್ ಮಲಪ್ರಭಾ ತಟದಲ್ಲಿರುವ ಸುಕ್ಷೇತ್ರ ಗೋವನಕೊಪ್ಪ ಬ್ರಹ್ಮಾನಂದ ಪರಮಹಂಸರ ೮೬ನೇ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಶನಿವಾರ ನೆರವೇರಿತು.ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ‘ಬ್ರಹ್ಮಾನಂದರ ಜೋಳಿಗೆ ದೇಶಕ್ಕೆಲ್ಲ ಹೋಳಿಗೆ’ ಎಂದು ಭಕ್ತರ ಹರ್ಷೋಧ್ಘಾರ, ಆರತಿ, ಕುಂಭ ಹೊತ್ತ ಮಹಿಳೆಯರ ಸಾಲು, ಸಕಲ ವಾದ್ಯಗಳೊಂದಿಗೆ ಸುಂದರವಾಗಿ ಅಲಂಕಾರಗೊಂಡಿದ್ದ ರಥ ಎಳೆದು ಭಕ್ತರು ಧನ್ಯತಾಭಾವ ಮೆರೆದರು.
ನರಸಾಪುರ ಹಿರೇಮಠದ ಮರುಳ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭೈರನಹಟ್ಟಿ ಪೂಜ್ಯ ಶಾಂತಲಿಂಗ ಸ್ವಾಮೀಜಿ ನೆತೃತ್ವದಲ್ಲಿ ವಿವಿಧ ಕಾರ್ಯಕ್ರಮ ಜರುಗಿದವು. ಹೊಳೆ ಆಲೂರಿನ ಯಚ್ಚರೇಶ್ವರ ಸ್ವಾಮೀಜಿ, ಬೆಳಗಾವಿ ಕಾರಂಜಿಮಠದ ಶಿವಯೋಗಿ ದೇವರು, ದೇವರಸಿಗೇಹಳ್ಳಿ ವೀರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಜಾತ್ರೆಗೆ ಬಂದ ಭಕ್ತರು ಮಠದ ಆವರಣದಲ್ಲಿ ಭೂರಿ ಭೋಜನದ ರುಚಿ ಸವಿದರು.ಜಾತ್ರೆಯ ಅಂಗವಾಗಿ ಬೈರನಹಟ್ಟಿ ಶಾಂತವಿರೇಶ್ವರ ಧಾರ್ಮಿಕ ಪಾಠಶಾಲೆಯ ವಟುಗಳಿಂದ ಬ್ರಹ್ಮಾನಂದರ ಕರ್ತೃ ಗದ್ದುಗೆಗೆ ನಿತ್ಯ ರುದ್ರಾಭಿಷೇಕ, ಧರ್ಮಸಭೆ, ಆಧ್ಯಾತ್ಮಿಕ ಪ್ರವಚನ, ಗರುಡ ಪಟ ಕಟ್ಟುವುದು, ಪಲ್ಲಕ್ಕಿ ಉತ್ಸವ, ಹರಕೆ ತಿರಿಸುವುದು ಹೀಗೆ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಒಂಭತ್ತು ದಿನಗಳ ಕಾಲ ಬ್ರಹ್ಮಾನಂದರ ಜೀವನ ದರ್ಶನ ಪ್ರವಚನ ನಡೆಯಿತು. ಕಮಿಟಿ ಅಧ್ಯಕ್ಷ ಕಿಷ್ಟಣ್ಣ ಬಿಜಾಪೂರ, ನಿವೃತ್ತ ಶಿಕ್ಷಕ ಆರ್.ಎಚ್. ಯಾವಗಲ್, ನಿಂಗನಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಶಿವಬಸಪ್ಪ ಹೆರಕಲ್, ಮುರಳೀಧರ ಯಡನ್ನವರ, ದಾವಲ್‌ಸಾಬ ಹೊಸಮನಿ, ಲಕ್ಷ್ಮಣ ದೊಡಮನಿ, ಆನಂದಪ್ಪ ಗಿಡ್ನಂದಿ, ಆರ್.ಕೆ.ಪಾಟೀಲ ಸೇರಿದಂತೆ ಗ್ರಾಮಸ್ಥರು ಇದ್ದರು. ಶಿಕ್ಷಕ ರಾಘವೇಂದ್ರ ಕಂದಗಲ್ ಸ್ವಾಗತಿಸಿದರು, ಮಂಜು ದ್ಯಾವನ್ನವರ ನಿರೂಪಿಸಿದರು, ಶಿಕ್ಷಕ ಶರಣು ಕರಕಿಕಟ್ಟಿ ವಂದಿಸಿದರು.