ಬ್ರಹ್ಮಾನಂದ ಶ್ರೀಗಳಿಗೆ ಕುಂಭಮೇಳದಲ್ಲಿ ಮಹಾಮಂಡಲೇಶ್ವರ ಪದವಿ ಪಟ್ಟಾಭಿಷೇಕ

| Published : Feb 02 2025, 01:03 AM IST

ಬ್ರಹ್ಮಾನಂದ ಶ್ರೀಗಳಿಗೆ ಕುಂಭಮೇಳದಲ್ಲಿ ಮಹಾಮಂಡಲೇಶ್ವರ ಪದವಿ ಪಟ್ಟಾಭಿಷೇಕ
Share this Article
  • FB
  • TW
  • Linkdin
  • Email

ಸಾರಾಂಶ

ನಾಮಧಾರಿ ಸಮಾಜದ ಕುಲಗುರುಗಳಾದ ಧರ್ಮಸ್ಥಳದ ಉಜಿರೆ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರಿಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕ ಜುನಾ ಅಖಾಡದ ಮೂಲಕ ನೆರವೇರಿತು.

ಭಟ್ಕಳ: ನಾಮಧಾರಿ ಸಮಾಜದ ಕುಲಗುರುಗಳಾದ ಧರ್ಮಸ್ಥಳದ ಉಜಿರೆ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರಿಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕ ಜುನಾ ಅಖಾಡದ ಮೂಲಕ ನೆರವೇರಿತು.

ಕರ್ನಾಟಕದ ಸ್ವಾಮೀಜಿಯೋರ್ವರಿಗೆ ದೊರೆತಿರುವ ಮೊದಲ ಮಹಾಮಂಡಲೇಶ್ವರ ಪದವಿ ಎನ್ನುವುದು ಹೆಮ್ಮೆಯ ವಿಚಾರ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಸ್ವತಂತ್ರ ಪೀಠಾಧೀಶರಿಗೆ ಈ ಪದವಿ ನೀಡಲಾಗುತ್ತದೆ. ವಾರಾಣಸಿಯ ಪಂಚದಶನಾಮ್ ಜುನಾ ಅಖಾಡದಲ್ಲಿರುವ ಸಾಧು ಸಮಾಜದ ಮಹಾಮಂಡಲೇಶ್ವರ ಆಚಾರ್ಯ ಅವಧೇಶಾನಂದ ಗಿರಿ ಮಹಾರಾಜರು ಈ ಪುಣ್ಯ ಕಾರ್ಯದ ಪಟ್ಟಾಭಿಷೇಕವನ್ನು ಶುಕ್ರವಾರ ಮಹಾಕುಂಭಮೇಳದಲ್ಲಿ ನಿರ್ವಹಿಸಿದರು. ಪಟ್ಟಾಭಿಷೇಕಕ್ಕೂ ಮುನ್ನ ಅಖಾಡದಲ್ಲಿರುವ ಕ್ಯಾಬಿನೆಟ್ ಸದಸ್ಯರು ಸ್ವಾಮೀಜಿಯವರ ಆಧ್ಯಾತ್ಮಿಕ ಸತ್ಸಂಗವನ್ನು ಪರಿಶೀಲಿಸಿ, ಬೈಠಕ್‌ನಲ್ಲಿ ಚರ್ಚಿಸಿದರು.

ಶ್ರೀಗಳು ಮುಂದೆ ದೇಶದಾದ್ಯಂತ ಧರ್ಮ ಪ್ರಚಾರದ ಜತೆಗೆ ಆಧ್ಯಾತ್ಮದ ಉನ್ನತ ಸಾಧನೆಗಾಗಿ ಧಾರ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಅರ್ಹತೆ ಉಳ್ಳವರಾಗಿದ್ದಾರೆ ಎಂದು ಪರಿಗಣಿಸಿ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಜುನಾ ಅಖಾಡ ಈ ಜವಾಬ್ದಾರಿ ವಹಿಸಿದೆ.

ಅಂತಾರಾಷ್ಟ್ರೀಯ ಜುನಾ ಅಖಾಡದ ಅಧ್ಯಕ್ಷ ಹರಿಗಿರಿ ಮಹಾರಾಜ್, ಜುನಾ ಅಖಾಡ ಉಪಾಧ್ಯಕ್ಷ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಜುನಾ ಅಖಾಡದ ಉತ್ತರಾಖಂಡ ಮಹಾಮಂತ್ರಿ ದೇವಾನಂದ ಮಹಾರಾಜ್, ಕೋಶಾಧಿಕಾರಿ ಧೀರತ್ ಗಿರಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಟ್ರಸ್ಟಿ ತುಕಾರಾಮ ಸಾಲ್ಯಾನ್, ಭಟ್ಕಳದ ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಪೃಥ್ವಿ, ಗೋವಿಂದ ನಾಯ್ಕ ಭಟ್ಕಳ, ಮುಕುಂದ ನಾಯ್ಕ ಭಟ್ಕಳ, ಗಣೇಶ ಹರಿಕಾಂತ ಮುರ್ಡೇಶ್ವರ, ಉಕ ಜಿಲ್ಲೆಯ ಶ್ರೀರಾಮಕ್ಷೇತ್ರ ಸೇವಾ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.