ಐತಿಹಾಸಿಕ ವೆಂಕಟರಮಣನ ಬ್ರಹ್ಮರಥೋತ್ಸವ

| Published : Mar 26 2024, 01:17 AM IST

ಸಾರಾಂಶ

ದೊಡ್ಡಬಳ್ಳಾಪುರ, ಬೆಂಗಳೂರು ಸೇರಿ ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಶ್ರೀಸ್ವಾಮಿಯ ರಥಕ್ಕೆ ಹಣ್ಣು-ಧವನ ಅರ್ಪಿಸಿ ಭಕ್ತಿಭಾವ ಮೆರೆದರು. ರಥೋತ್ಸವದ ಅಂಗವಾಗಿ ದೇವಾಲಯದ ಮೂಲದೇವರ ವಿಗ್ರಹಕ್ಕೆ ವಿಶೇಷಾಲಂಕಾರ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನ ಇತಿಹಾಸ ಪ್ರಸಿದ್ಧ ತೂಬಗೆರೆ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಹೋಳಿ ಹುಣ್ಣಿಮೆ ದಿನವಾದ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ದೊಡ್ಡಬಳ್ಳಾಪುರ, ಬೆಂಗಳೂರು ಸೇರಿ ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಶ್ರೀಸ್ವಾಮಿಯ ರಥಕ್ಕೆ ಹಣ್ಣು-ಧವನ ಅರ್ಪಿಸಿ ಭಕ್ತಿಭಾವ ಮೆರೆದರು. ರಥೋತ್ಸವದ ಅಂಗವಾಗಿ ದೇವಾಲಯದ ಮೂಲದೇವರ ವಿಗ್ರಹಕ್ಕೆ ವಿಶೇಷಾಲಂಕಾರ ಮಾಡಲಾಗಿತ್ತು.

ಬೆಳಿಗ್ಗೆಯಿಂದಲೇ ಬ್ರಹ್ಮರಥೋತ್ಸವದ ಅಂಗವಾಗಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಗೆ ವಿಶೇಷವಾಗಿ ಅಭಿಷೇಕ, ಸುಪ್ರಭಾತ ಸೇವೆ, ತೋಮಾಲೆ ಸೇವೆ, ನವಗ್ರಹ ಪೂಜೆ ಹಾಗೂ ರಥದ ಮುಂಭಾಗದಲ್ಲಿ ಹೋಮಗಳನ್ನು ನಡೆಸಲಾಯಿತು. ಸುಮಂಗಲಿಯರಿಂದ ಭಕ್ತಿಗೀತೆ ಗಾಯನ, ಭಜನೆ, ಆಗಮಿಕರ ಮಂತ್ರ ಪಠಣೆಗಳು ಭಕ್ತ ಜನಸಾಗರದ ಜಯಘೋಷದೊಂದಿಗೆ ರಥೋತ್ಸವ ಜರುಗಿತು. ಜಾತ್ರೆಯ ಪ್ರಯುಕ್ತ ದೇವಾಲಯದ ಜೀರ್ಣೋದ್ಧಾರ ಸಮಿತಿಯಿಂದ ಭಕ್ತರಿಗೆ ಪ್ರಸಾದ ವಿತರಣೆ ಏರ್ಪಡಿಸಲಾಗಿತ್ತು. ಅರವಂಟಿಕೆ ಮೂಲಕ ಪಾನಕ-ಕೋಸಂಬರಿ, ನೀರು ಮಜ್ಜಿಗೆ ವಿತರಿಸಲಾಯಿತು.

ರಥೋತ್ಸವದಲ್ಲಿ ರಾಜಕಾರಣಿಗಳ ದಂಡು:

ಲೋಕಸಭಾ ಚುನಾವಣೆ ನಿಗದಿಯಾಗಿರುವುದರಿಂದ ರಥೋತ್ಸವದಲ್ಲಿ ಹಲವು ರಾಜಕೀಯ ಮುಖಂಡರು ಪಾಲ್ಗೊಂಡಿದ್ದು, ಈ ಬಾರಿಯ ವಿಶೇಷವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಾದ ಎಂ.ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ ದೇವಾಲಯಕ್ಕೆ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೊಯ್ಲಿ ಹಾಗೂ ರಕ್ಷಾ ರಾಮಯ್ಯ ಒಟ್ಟಿಗೆ ಪೂಜೆಯಲ್ಲಿ ಭಾಗಿಯಾಗಿದ್ದರು.

ಸಂಜೆ ವೇಳೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಭೇಟಿ ನೀಡಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಥೋತ್ಸವದಲ್ಲಿ ಪಾಲ್ಗೊಂಡ ಗಣ್ಯರು ಮಾತನಾಡಿ, ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಚೋಳರ ಕಾಲದ ದೇಗುಲ ಇದಾಗಿದ್ದು, ವಿಜಯನಗರ ಕಾಲದಲ್ಲಿ ದೇಗುಲ ಪುನಶ್ಚೇತನಗೊಂಡಿದೆ. ಇಲ್ಲಿ ಉಗ್ರ ನರಸಿಂಹ ಸ್ವಾಮಿಯ ದೇವಾಲಯವೂ ಇದೆ. ಅದರ ಮುಂಭಾಗದಲ್ಲಿ ವೆಂಕಟರಮಣಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಗ್ರಹವನ್ನು ತಿರುಮಲ-ತಿರುಪತಿಗೆ ತೆರಳಿ ಅಲ್ಲಿಂದ ತರಲಾಗಿದೆ ಎಂಬ ನಂಬಿಕೆ ಇದೆ ಎಂದರು.

ಈ ವೇಳೆ ಸ್ಥಳೀಯ ಮುಖಂಡರು ಹಾಗೂ ದೇವಾಲಯ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.