ಸಾರಾಂಶ
ಕುಷ್ಟಗಿ:
ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆ ಯಾರೊಬ್ಬರೂ ಮರೆಯಬಾರದು, ಅವರ ಮಾರ್ಗದರ್ಶನ ನಮಗೆಲ್ಲ ಸ್ಫೂರ್ತಿದಾಯಕವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೇಲ್ಜಾತಿ, ಕೆಳಜಾತಿ, ಅಸ್ಪೃಶ್ಯತೆ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಜಾತೀಯತೆ ತೊಲಗಿಸುವುದು ತಮ್ಮ ಜೀವನದ ಧ್ಯೇಯವೆಂದು ನಾರಾಯಣ ಗುರುಗಳು ಶಪಥ ಮಾಡಿದವರು ಎಂದರು.
ಸಮಾಜ ವಿರೋಧಿ ಕಾರ್ಯಗಳಿಗೆ ಮುಟ್ಟುಗೋಲು ಹಾಕಲು ಅವರು ತೆಗೆದುಕೊಂಡ ಕ್ರಮ, ಆಂದೋಲನಗಳು ಅನನ್ಯ. ಕೆಳವರ್ಗದಲ್ಲಿ ಜನಿಸಿದ ಜನರಿಗೆ ದೇವಸ್ಥಾನ ಪ್ರವೇಶಕ್ಕೆ ಅವರು ಬೇಡಲಿಲ್ಲ ಅಥವಾ ಹಿಂಸಾಚಾರದ ಚಳವಳಿಗಳನ್ನು ನಡೆಸಲಿಲ್ಲ. ತಾವೇ ದೇವಾಲಯಗಳನ್ನು ಸ್ಥಾಪಿಸುವ ಮೂಲಕ ಒಂದು ಹೊಸ ಆಲೋಚನಾ ಕ್ರಮ ಹುಟ್ಟು ಹಾಕಿದರು. ಕೇರಳದಾದ್ಯಂತ 60ಕ್ಕೂ ಹೆಚ್ಚು ದೇವಾಲಯ ಸ್ಥಾಪಿಸಿದರು ಎಂದು ಹೇಳಿದರು.ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಮಹಾನ್ ಸಮಾಜ ಸುಧಾರಕರು. ಆಗಿನ ಕಾಲದಲ್ಲಿ ಸಮಾಜದಲ್ಲಿ ಹೆಚ್ಚಾಗಿದ್ದ ಜಾತಿ, ಮತ, ಭೇದಗಳನ್ನು ಕಡಿಮೆ ಮಾಡಲು ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದರು ಎಂದ ಅವರು, ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ವವೇ ಇಂದು ಜಗತ್ತಿನಲ್ಲಿದೆ. ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯವಾಕ್ಯವನ್ನು ಸಮಾಜಕ್ಕೆ ಸಾರಿದವರಲ್ಲಿ ನಾರಾಯಣ ಗುರುಗಳು ಪ್ರಮುಖರು ಎಂದರು.
ಸಂಸ್ಕೃತ ಭಾಷೆಯಲ್ಲಿ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರ ಉಪಾಯಗಳನ್ನು ಕಂಡುಕೊಂಡರು. ದೇಶ ಸೇವೆಯೇ ಈಶ ಸೇವೆ ಎಂದು ಬೋಧಿಸಿದರು ಎಂದು ಹೇಳಿದರು.ಈ ವೇಳೆ ಗ್ರೇಡ್-೨ ತಹಸೀಲ್ದಾರ್ ರಜನಿಕಾಂತ ಕೆಂಗಾರಿ, ಈಡಿಗ ಸಮಾಜದ ತಾಲೂಕಾಧ್ಯಕ್ಷ ಉಮಾಕಾಂತ ಗೌಡರ, ಸುಖರಾಮಪ್ಪ ಗೋತಗಿ, ಶರಣಪ್ಪ ಹಂಪನಾಳ, ಜಗನ್ನಾಥ ಗೋತಗಿ, ಅಶೋಕ ವಣಗೇರ, ರವಿಕುಮಾರ ಈಡಿಗ, ಸುಂದರರಾಜ , ಅಕ್ಷಯಕುಮಾರ, ಶರಣಪ್ಪ ಹುಡೇದ, ವಿಜಯಾ ಮುಂಡರಗಿ, ಅನಂತಕುಮಾರ, ರಾಜೇಶ್ವರಿ, ಚಂದ್ರು ಪೂಜಾರ, ಸೈಯದ್ ಮಹ್ಮದ, ಪ್ರಜ್ವಲ್ ಹಿರೇಮನಿ ಸೇರಿದಂತೆ ಅನೇಕರು ಇದ್ದರು.