ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ
ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ಸಮಾಜದ ಸುಧಾರಣೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ನೀಡಿದ ಕೊಡುಗೆ ಅಪಾರವಾದದ್ದು ಎಂದು ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ ತಿಳಿಸಿದರು.ಅವರು ಸಮೀಪದ ಯಡೇಹಳ್ಳಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಳ ಜೀವನ ನಡೆಸಿದ ನಾರಾಯಣ ಗುರುಗಳು ಸಮಾಜದ ಎಲ್ಲಾ ವರ್ಗಗಳ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಇವರ ತತ್ವ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಸಮಾಜ ಅಭಿವೃದ್ಧಿ ಯಾಗಲು ಸಾಧ್ಯ ಎಂದರು.ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಯ ಕಾರ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜಕೀಯ ನಾಯಕರು ಗಮನಹರಿಸಬೇಕು. ಹಾಗೆ ನಮ್ಮ ಸಮಾಜದ ಅಭಿವೃದ್ಧಿ ಗಾಗಿ ಹೆಚ್ಚಿನ ಸಂಘಟನಾತ್ಮಕ ಕಾರ್ಯದಲ್ಲಿ ಭಾಗವಹಿಸಬೇಕಾದ ಅವಶ್ಯಕತೆ ಇದೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವದರೊಂದಿಗೆ. ನಮ್ಮ ಸಮಾಜದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ಸಂಘಟನಾತ್ಮಕ ಶಕ್ತಿ ಬಳಸುವಲ್ಲಿ ನಮ್ಮೆಲ್ಲರ ಶ್ರಮಿಸಬೇಕಾದ ಅವಶ್ಯಕತೆ ಇದೆ ಎಂದರು.ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯ ಮೆರವಣಿಗೆಗೆ ಚಾಲನೆ ನೀಡಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಗತ್ತಿಕೆರೆ ನಿಟ್ಟೂರು ಮಠದ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಸಮುದಾಯ ಸದೃಢವಾಗಿ ಬೆಳೆಯಬೇಕಾದರೆ ನಮ್ಮಲ್ಲಿರುವ ಸಂಘಟನಾಶಕ್ತಿ ಜಾಗೃತವಾಗಬೇಕು ಎಂದರು.
ಆನಂದಪುರ ದಾಸಕೊಪ್ಪ ವೃತ್ತದಿಂದ ಯಡೇಹಳ್ಳಿಯವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ತಳಿಯ ಮೆರವಣಿಗೆ ನಡೆಸ ಲಾಯಿತು. ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಅಧ್ಯಕ್ಷ ಪ್ರಕಾಶ್ ಕಣ್ಣೂರ್ ಅಧ್ಯಕ್ಷತೆ ವಹಿಸಿದ್ದು. ಡಾ.ರಾಜನಂದಿನಿ ಕಾಗೋಡು, ಪ್ರಶಾಂತ್, ರತ್ನಾಕರ ಹೊನಗೋಡು, ಚೇತನ್ ರಾಜ್ ಕಣ್ಣೂರ್, ಕೊಟ್ರಪ್ಪ ನೇದರಹಳ್ಳಿ ಪ್ರವೀಣ್, ಸತೀಶ್, ಪ್ರಭಾವತಿ, ಬಸವರಾಜ್ ಉಪಸ್ಥಿತರಿದ್ದರು.