ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ವಿಶ್ವಮಾನವ ತತ್ವ ಪ್ರತಿಪಾದಿಸಿ ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜಿಕ ಕ್ರಾಂತಿಯನ್ನು ಮಾಡಿದ ಶ್ರೀ ನಾರಾಯಣ ಗುರುಗಳು ಒಂದು ಜಾತಿಗೆ ಸೀಮಿತರಾಗದೆ ಅವರು ವಿಶ್ವ ಗುರುಗಳಾಗಿದ್ದಾರೆ ಎಂದು ಶ್ರೀಕ್ಷೇತ್ರ ಗೆಜ್ಜೆಗಿರಿಯ ತಂತ್ರಿವರ್ಯರಾದ ಶಿವಾನಂದ ಶಾಂತಿ ಹೇಳಿದರು.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮಂಗಳವಾರ ಶ್ರೀನಾರಾಯಣ ಗುರುಗಳ ೧೭೦ನೇ ಜನ್ಮ ದಿನಾಚರಣೆ, ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಲೋಕಾರ್ಪಣೆ, ಶ್ರೀ ರುಕ್ಕರಾಮ ಸಾಲ್ಯಾನ್ ಸಭಾಗೃಹ ಉದ್ಘಾಟನೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚಿಸಿದರು.ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ನಾರಾಯಣ ಗುರುಗಳನ್ನು ಕೇವಲ ಭಜನೆ ಪೂಜೆಗೆ ಸೀಮಿತರಾಗಿಸದೆ ಅವರ ತತ್ವ ಆದರ್ಶಗಳನ್ನು ಪಾಲನೆಗೊಳಿಸುವ ಮೂಲಕ ಸದೃಢರಾಗಬೇಕು. ಮಕ್ಕಳಿಗೆ ಅವರ ತತ್ವದ ಸತ್ವಗಳನ್ನು ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ ಮಾತನಾಡಿ, ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರದ ತಿಳುವಳಿಕೆ ನೀಡಬೇಕು. ಸಂಸ್ಕಾರ ಪೂರ್ಣ ಶಿಕ್ಷಣ ಜೀವನದ ಅಭಿವೃದ್ಧಿಗೆ ಪೂರಕವಾಗುವುದು ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಶುಭ ಹಾರೈಸಿದರುಸನ್ಮಾನ: ಸಂಘದ ಕಟ್ಟಡ ಸಮಿತಿ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿ ಕೀರ್ತಿಶೇಷರಾದ ವಿಠಲ ಅಮೀನ್ ಕಾರ್ನಾಡು ಅವರಿಗೆ ಬಿಲ್ಲವ ರತ್ನ ಪುರಸ್ಕಾರ, ಸಂಘದ ಕಟ್ಟಡಕ್ಕೆ ಅಧಿಕ ಮೊತ್ತ ದಾನ ನೀಡಿದ ಭಾರತ್ ಬ್ಯಾಂಕ್ ಹಾಗೂ ಸಿಬ್ಬಂದಿ ಅವರನ್ನು ನಿರ್ದೇಶಕ ಭಾಸ್ಕರ ಸಾಲ್ಯಾನ್ ಮುಂಬೈ ಸನ್ಮಾನ ಸ್ವೀಕರಿಸಿದರು. ಸಮುದಾಯ ಭವನಕ್ಕೆ ಕುರ್ಚಿಗಳ ಕೊಡುಗೆ ನೀಡಿದ ಚಂದ್ರಶೇಖರ ಸ್ವಾಮೀಜಿ, ವೈದಿಕ ಕಾರ್ಯಕ್ರಮಗಳನ್ನು ನಡೆಸಿದ ಶಿವಾನಂದ ಶಾಂತಿ ಹಾಗೂ ಕರುಣಾಕರ್ ಮತ್ತು ಪುಷ್ಪಲತಾ ಕರುಣಾಕರ್ ಕೊಳಚಿಕಂಬಳ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಹಾಗೂ ೫೦ ಸಾವಿರಕ್ಕೂ ಅಧಿಕ ಧನ ಸಹಾಯ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಘದಲ್ಲಿ ವಿದ್ಯಾರ್ಥಿವೇತನ ಪಡೆದು ಪದವಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಚೈತನ್ಯ ಕೋಟ್ಯಾನ್ ಮತ್ತು ಅಂಕಿತಾ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ. ಪ್ರಕಾಶ ಸುವರ್ಣ ವಹಿಸಿದ್ದರು.ಅತಿಥಿಗಳಾಗಿ ಮೂಲ್ಕಿ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹರೀಂದ್ರ ಸುವರ್ಣ, ದಾನಿ ಶಶಿಧರ ಕೋಟ್ಯಾನ್, ಬಿರುವೆರ್ ಕುಡ್ಲಾ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು,ಮೂಲ್ಕಿ ಸಂಘದ ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಯದೀಶ್ ಅಮೀನ್, ಸೇವಾದಳದ ಅಧ್ಯಕ್ಷರಾದ ಶಂಕರ್ ಪಡುಬೈಲು,ಯುವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ರಿತೇಶ್ ಮೂಲ್ಕಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಯ ಕುಮಾರ್ ಕುಬೆವೂರು, ಕೋಶಧಿಕಾರಿ ಕಮಲಾಕ್ಷ ಬಡಗುಹಿತ್ಲು ಉಪಸ್ಥಿತರಿದ್ದರು.ಪ್ರಕಾಶ್ ಸುವರ್ಣ ಸ್ವಾಗತಿಸಿದರು, ಗೋಪೀನಾಥ ಪಡಂಗ ಪ್ರಸ್ತಾವಿಸಿದರು, ನರೇಂದ್ರ ಕೆರೆಕಾಡು ನಿರೂಪಿಸಿದರು, ಜಯ ಕುಮಾರ್ ವಂದಿಸಿದರು.