ಸಾರಾಂಶ
ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಇದ್ದಂತಹ ನಾರಾಯಣ ಗುರುಗಳು ಅಂದಿನ ಸಮಾಜದಲ್ಲಿ ಇದ್ದ ಮೂಢನಂಬಿಕೆ ಮತ್ತು ಅಸ್ಪೃಶ್ಯತೆಯನ್ನು ಧಿಕ್ಕರಿಸಿ ಹೋಗಲಾಡಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಬದಲಾವಣೆಗಳನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೀಗಾಗಿ ಅವರು ಸಾಮಾಜಿಕ ಸುಧಾರಣೆ ಹರಿಕಾರ.
ಕನ್ನಡಪ್ರಭ ವಾರ್ತೆ ಮದ್ದೂರು
ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ಮಾನವೀಯತೆಯ ಸಂದೇಶದೊಂದಿಗೆ ಜಗತ್ತಿಗೆ ಬೆಳಕು ನೀಡಿದ ಮಹಾನ್ ಚೇತನ ಎಂದು ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಶನಿವಾರ ಹೇಳಿದರು.ಪಟ್ಟಣದ ಶಿವಪುರದ ನಿಡಘಟ್ಟ ಅಣ್ಣೇಗೌಡರ ವಾಣಿಜ್ಯ ಸಮುಚ್ಛಯದಲ್ಲಿ ತಾಲೂಕು ಆರ್ಯ ಈಡಿಗರ ಸಂಘದಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಪ್ರಸ್ತುತ ಎಲ್ಲಾ ಸಮಾಜದ ಗುರುಗಳಿಗೆ ಹೋಲಿಕೆ ಮಾಡಿದರೆ ನಾರಾಯಣ ಗುರುಗಳ ಉಪದೇಶಗಳು ಕೇವಲ ಈಡಿಗ ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಇಡೀ ಮಾನವ ಜನಾಂಗಕ್ಕೆ ನೀಡಿದ ಸಂದೇಶವಾಗಿದೆ ಎಂದರು.ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಇದ್ದಂತಹ ನಾರಾಯಣ ಗುರುಗಳು ಅಂದಿನ ಸಮಾಜದಲ್ಲಿ ಇದ್ದ ಮೂಢನಂಬಿಕೆ ಮತ್ತು ಅಸ್ಪೃಶ್ಯತೆಯನ್ನು ಧಿಕ್ಕರಿಸಿ ಹೋಗಲಾಡಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಬದಲಾವಣೆಗಳನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೀಗಾಗಿ ಅವರು ಸಾಮಾಜಿಕ ಸುಧಾರಣೆ ಹರಿಕಾರ ಎಂದು ನಾರಾಯಣಸ್ವಾಮಿ ಬಣ್ಣಿಸಿದರು.
ಈಡಿಗರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸೌಮ್ಯ ಶ್ರೀನಿವಾಸ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಜ್ಞಾನದ ಮಾರ್ಗ ಅನುಸರಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ. ಇಂದಿನ ಯುವ ಸಮೂಹ ಅವರ ಸದ್ಗುಣಗಳನ್ನು ಮೈ ಗೂಡಿಸಿಕೊಂಡು ನವ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ಈಡಿಗರ ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷರಾದ ಎ.ಎಚ್.ನಾರಾಯಣಸ್ವಾಮಿ, ಓಬಳ ರಂಗಯ್ಯ, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಶ್ರೀನಿವಾಸ್, ಸಂಚಾಲಕ ನಿತಿನ್ ಗೌಡ, ಚೆಸ್ಕಾಂ ಉಪ ಕಾರ್ಯದರ್ಶಿ ಗೋವಿಂದರಾಜು, ಮುಖಂಡರಾದ ಈಡಿಗರ ತಮ್ಮಯ್ಯ, ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.