ಸಾರಾಂಶ
ಬ್ರಹ್ಮಾವರ ನಗರದ ಮಾರ್ಕೆಟ್ ಬಳಿ, ತ್ಯಾಜ್ಯ ಸಂಸ್ಕರಿಸುವ ಎಸ್.ಎಲ್.ಆರ್.ಎಮ್. (ಸಾಲಿಡ್ ಆ್ಯಂಡ್ ಲಿಕ್ವಿಡ್ ರಿಸೋರ್ಸ್ ಮ್ಯಾನೇಜ್‌ಮೆಂಟ್) ಘಟಕದಲ್ಲಿ ಶುಕ್ರವಾರ ತಡರಾತ್ರಿ ಆಕಸ್ಮಿಕ ಬೆಂಕಿ ಅನಾಹುತ ನಡೆದಿದ್ದು, ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ನಗರದ ಮಾರ್ಕೆಟ್ ಬಳಿ, ತ್ಯಾಜ್ಯ ಸಂಸ್ಕರಿಸುವ ಎಸ್.ಎಲ್.ಆರ್.ಎಮ್. (ಸಾಲಿಡ್ ಆ್ಯಂಡ್ ಲಿಕ್ವಿಡ್ ರಿಸೋರ್ಸ್ ಮ್ಯಾನೇಜ್‌ಮೆಂಟ್) ಘಟಕದಲ್ಲಿ ಶುಕ್ರವಾರ ತಡರಾತ್ರಿ ಆಕಸ್ಮಿಕ ಬೆಂಕಿ ಅನಾಹುತ ನಡೆದಿದ್ದು, ಲಕ್ಷಾಂತರ ರು. ನಷ್ಟ ಸಂಭವಿಸಿದೆ.ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದ್ದು, ಆವರಣದಲ್ಲಿ ನಿಲ್ಲಿಸಿದ ಮೂರು ಏಎಸ್ ವಾಹನಗಳು, ಒಂದು ಪಿಕಪ್, ಲಕ್ಷಾಂತರ ಮೌಲ್ಯದ ಕಸ, ಎರಡು ಬೇಲಿಂಗ್ ಮೆಶಿನ್, ಒಂದು ಬರ್ನಿಂಗ್ ಮೆಶಿನ್, 6ಸಿಸಿ ಕೆಮರಾಗಳು, ಕಚೇರಿ ಫೈಲ್ ಗಳು, ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಪಕ್ಕದ ಗುಜರಿ ಅಂಗಡಿ ಮತ್ತು ಇಲ್ಲೆಕ್ಟ್ರಿಕಲ್ಸ್ ಅಂಗಡಿಗೂ ಬೆಂಕಿನ ಕೆನ್ನಾಲಿಗೆ ಚಾಚಿದ್ದು, ಅಲ್ಲಿಯೂ ನಷ್ಟ ಉಂಟಾಗಿದೆ.
ಘಟಕದಲ್ಲಿ ನೂರಾರು ಟನ್ ಒಣ ತ್ಯಾಜ್ಯ ಇತ್ತು. ಉಡುಪಿ, ಕುಂದಾಪುರ, ಮಲ್ಪೆಯ ಅಗ್ನಿಶಾಮಕ ವಾಹನಗಳು ಧಾವಿಸಿ ಬಂದು ಹರಸಾಹಸದಿಂದ ಬೆಂಕಿ ನಂದಿಸಲಾಯಿತು. ಆದರೂ ಅದಾಗಲೇ ಹತ್ತಿಪ್ಪತ್ತು ಲಕ್ಷ ರು.ಗೂ ಹೆಚ್ಚು ನಷ್ಟ ಸಂಭವಿಸಿಯಾಗಿತ್ತು.ಅಗ್ನಿಶಾಮಕ ಸಿಬ್ಬಂದಿ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಹರಡದಂತೆ ಆದ್ಯತೆ ವಹಿಸಿದ್ದರಿಂದ, ಇನ್ನೂ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ. ಉಪ್ಪಿನಕೋಟೆಯ ಜೆಎಂಜೆ ಟ್ಯಾಂಕರ್ ನವರು ಅಗ್ನಿಶಾಮಕ ವಾಹನಗಳಿಗೆ ಸುಮಾರು 15 ಟ್ಯಾಂಕರ್ ನೀರನ್ನು ಮತ್ತು ಅಲ್ತಾಫ್ ಮಟಪಾಡಿ ಅವರು ಜೆಸಿಬಿ ಒದಗಿಸಿ ಸಹಾಯ ಮಾಡಿದರು.