ಬ್ರಹ್ಮಾವರ: ಜಿ.ಎಂ.ನಲ್ಲಿ ವಿಶ್ವಪರಿಸರ ದಿನದ ಸಂಭ್ರಮ

| Published : Jun 21 2024, 01:01 AM IST

ಸಾರಾಂಶ

ವಿದ್ಯಾರ್ಥಿಗಳು ಹಾಡು, ನೃತ್ಯ, ಮೈಮ್ ಶೋ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ಶಾಲಾ ವಠಾರದಲ್ಲಿ ಕಸಗಳನ್ನು ತೆರವುಗೊಳಿಸಿ, ಸಸಿಗಳನ್ನು ನೆಡಲಾಯಿತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಚೈತನ್ಯ ಎಚ್.ಎಸ್. ಮಾತನಾಡಿ, ಇಂದು ಎಲ್ಲ ಕಡೆಗಳಲ್ಲೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಂತರದ ದಿನಗಳಲ್ಲಿ ಅದನ್ನು ಮರೆತುಬಿಡುತ್ತಾರೆ. ಇದರಿಂದ ಪರಿಸರದ ಉಳಿವು ಸಾಧ್ಯವಿಲ್ಲ, ಪರಿಸರ ಕಾಳಜಿ ನಿತ್ಯ ನಿರಂತರವಾಗಿರಬೇಕು. ಎಲ್ಲರೂ ತಮ್ಮ ಹುಟ್ಟುಹಬ್ಬದ ದಿನದಂದು ಗಿಡವನ್ನು ನೆಟ್ಟು ಅದರ ಆರೈಕೆಯನ್ನು ಮಾಡಬೇಕು ಎಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಹಾಗೂ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಇತರರಲ್ಲೂ ಪರಿಸರ ಜಾಗೃತಿಯನ್ನು ಮೂಡಿಸಬೇಕು ಎಂದರು.

ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್, ಮಕ್ಕಳಿಂದ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಸ್ವೀಕರಿಸಿ ಮಾತನಾಡಿ, ಪರಿಸರ ವ್ಯವಸ್ಥೆ ಹಾಗೂ ಅದರ ಸಮರ್ಪಕ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಹಾಡು, ನೃತ್ಯ, ಮೈಮ್ ಶೋ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ಶಾಲಾ ವಠಾರದಲ್ಲಿ ಕಸಗಳನ್ನು ತೆರವುಗೊಳಿಸಿ, ಸಸಿಗಳನ್ನು ನೆಡಲಾಯಿತು.