ಬ್ರಹ್ಮಾವರ: ಜಿ.ಎಂ.ನಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ

| Published : Sep 09 2024, 01:30 AM IST

ಸಾರಾಂಶ

ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ್‌ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ವಾಲಿಬಾಲ್, ಹಗ್ಗಜಗ್ಗಾಟ ಪಂದ್ಯಾಕೂಟವನ್ನು, ಶಿಕ್ಷಕರಿಗೆ ವಿವಿಧ ಮನೋರಂಜನಾ ಆಟಗಳನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಇಲ್ಲಿನ ಜಿ.ಎಂ. ವಿದ್ಯಾನಿಕೇತನ್‌ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿಯ ಯು. ಕಮಲ ಬಾಯಿ ಹೈಸ್ಕೂಲಿನ ನಿವೃತ್ತ ಶಿಕ್ಷಕ ಎನ್.ಎಂ. ಪೂಜಾರಿ ಆಗಮಿಸಿದ್ದರು.ಅವರು ಸಂದೇಶ ನೀಡುತ್ತಾ, ಮಕ್ಕಳ ನಿಜವಾದ ಹಿತೈಶಿಗಳು ಶಿಕ್ಷಕರು ಮತ್ತು ಹೆತ್ತವರು. ಅವರು ನೀಡುವ ಶಿಕ್ಷೆಯಲ್ಲಿ ಒಳ್ಳೆಯ ಉದ್ದೇಶವಿರುತ್ತದೆ. ಅವರನ್ನು ಎಷ್ಟು ಗೌರವಿಸುತ್ತೇವೆ, ಪ್ರೀತಿಸುತ್ತೇವೆ ಅಷ್ಟು ಚೆನ್ನಾಗಿ ನಾವು ಬೆಳೆಯುತ್ತೇವೆ ಎಂದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ತಂದೆ-ತಾಯಿಯರು ನಮ್ಮ ಮೊದಲ ಗುರುಗಳಾಗಿದ್ದು, ಅವರ ಆಶೀರ್ವಾದದೊಂದಿಗೆ ಅವರ ಮಾತನ್ನು ಪಾಲಿಸಬೇಕು. ಅದೇ ರೀತಿ ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ತೋರುವವರು. ಅವರನ್ನು ಸದಾ ಗೌರವಿಸಿ ಸ್ಮರಿಸಬೇಕು ಎಂದರು.ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್, ಶಿಕ್ಷಕರಿಂದ ಪ್ರತಿಜ್ಞೆಯನ್ನು ಸ್ವೀಕರಿಸಿ ಮಾತನಾಡಿ, ಶಿಕ್ಷಕ ಮಕ್ಕಳಲ್ಲಿರುವ ಕೌಶಲ್ಯಗಳನ್ನು ಗುರುತಿಸಿ ಅದನ್ನು ಉತ್ತೇಜಿಸಿ ಸಮಾಜಕ್ಕೆ ಅತ್ಯುತ್ತಮ ಪ್ರಜೆಯನ್ನು ನೀಡುತ್ತಾನೆ. ಒಬ್ಬ ಶಿಕ್ಷಕನಾಗಿ ನನಗೆ ಹೆಮ್ಮೆಯಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ವಾಲಿಬಾಲ್, ಹಗ್ಗಜಗ್ಗಾಟ ಪಂದ್ಯಾಕೂಟವನ್ನು, ಶಿಕ್ಷಕರಿಗೆ ವಿವಿಧ ಮನೋರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಗ್ರೀಟಿಂಗ್ಸ್, ನೃತ್ಯ ಮತ್ತು ಗಾಯನಗಳ ಮೂಲಕ ಶಿಕ್ಷಕರಿಗೆ ಶುಭ ಹಾರೈಸಿದರು.