ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಬ್ರಾಹ್ಮಣ ಸಮುದಾಯದವರು ಉತ್ತಮ ಸಂಸ್ಕಾರ, ವಿದ್ಯೆ, ಪರೋಪಕಾರ ಹಾಗೂ ಸಮಾಜ ನಿರ್ಮಾಣಕ್ಕೆ ಮೇಲ್ಪಂಕ್ತಿ ಹಾಕಿಕೊಡುವ ಮೂಲಕ ಮಾದರಿಯಾಗಿದ್ದಾರೆ ಎಂದು ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಬ್ರಾಹ್ಮಣಸಭಾದ 19ನೇ ವಾರ್ಷಿಕೋತ್ಸವದ ಅಂಗವಾಗಿ ನೂತನ ವರ್ಷ 2025ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಮನಗರದ ಇತಿಹಾಸ ಅವಲೋಕಿಸಿದಾಗ ಆಗಿನ ಕಾಲದಲ್ಲೇ ಉತ್ತಮ ಹಾಗೂ ಅಗಲವಾದ ರಸ್ತೆ, ಶುಚಿತ್ವ ಕಾಪಾಡಿಕೊಂಡು ಬಂದ ಬಡಾವಣೆ ಇದ್ದರೆ ಅದು ಅಗ್ರಹಾರ ಮಾತ್ರ. ಹೀಗಾಗಿ ಇಂದಿಗೂ ಸಹ ಅತ್ಯುತ್ತಮ ರಸ್ತೆಯನ್ನು ನಾವು ಅಗ್ರಹಾರದಲ್ಲಿ ಕಾಣಬಹುದು ಎಂದು ತಿಳಿಸಿದರು.ಬ್ರಾಹ್ಮಣ ಸಮಾಜ ಎಲ್ಲರ ಒಳಿತು ಬಯಸುವ ಸರ್ವೇ ಜನ ಸುಖೀನೋ ಭವಂತು ಎಂದು ಹೇಳುವ ಸಮಾಜ. ಅಂತಹ ಸಮಾಜದ ವಿಪ್ರ ಯುವ ಟ್ರಸ್ಟ್ ಕಳೆದ 19 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಕಾರ್ಯಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ರಾಹ್ಮಣ ಸಮುದಾಯ ಸ್ವಂತ ಶಕ್ತಿ, ಬುದ್ಧಿವಂತಿಕೆ ಹಾಗೂ ದೂರದೃಷ್ಟಿಯಿಂದ ದೇಶಕ್ಕೋಸ್ಕರ ನಾನಾ ಕೊಡುಗೆಗಳನ್ನು ನೀಡಿದೆ. ದೇಶದ ಅತ್ಯುನ್ನತ ಸ್ಥಾನಗಳನ್ನು ಈ ಸಮಾಜದ ಮಂದಿ ಅಲಂಕರಿಸಿದ್ದಲ್ಲದೇ ಅಪಾರ ಕೊಡುಗೆಗಳನ್ನು ನೀಡಿರುವುದು ಸ್ಮರಣೀಯವಾದುದು. ಇದೀಗ ತಾನೇ ನಗರಸಭೆಯ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿದ್ದು, ಅನೇಕ ಸವಾಲುಗಳು ನನ್ನ ಮುಂದಿವೆ ಎಂದರು.ರಸ್ತೆ, ನೀರು, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಆದ್ಯತೆಯಾಗಿದೆ. ರಾಮನಗರವನ್ನು ಪರಿಸರ ಸ್ನೇಹಿ ಮತ್ತು ಮಾದರಿ ನಗರ ಮಾಡಲು ಬ್ರಾಹ್ಮಣ ಸಮುದಾಯವು ಸಲಹೆ ಸೂಚನೆ ನೀಡಬೇಕೆಂದು ತಿಳಿಸಿದರು.
ವಿಪ್ರ ಯುವ ಟ್ರಸ್ಟ್ ಅಧ್ಯಕ್ಷ ಟಿ.ಕೇಶವ ವೈದ್ಯ ಹಾಗೂ ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಆರ್.ಜಿ. ಚಂದ್ರಶೇಖರ್ ವೇದಿಕೆ ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ವಾರ್ಷಿಕೋತ್ಸವದ ಅಂಗವಾಗಿ ಸಮಾಜದ ಮಕ್ಕಳಿಂದ ಭರತನಾಟ್ಯ, ಭಕ್ತಿ ಗೀತೆ, ಭಾವಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಹಿಳಾ ಮಂಡಳಿ ವತಿಯಿಂದ ಭಜನೆ ಹಾಗೂ ದೇವರನಾಮ ಕಾರ್ಯಕ್ರಮ ಸಹ ನಡೆದವು.ಜನಾರ್ದನ ಹೋಟೆಲ್ ಮಾಲೀಕರಾದ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು. ಪಿ.ವೈ. ರವಿಂದ್ರ ಹೇರ್ಳೆ, ವಿಪ್ರ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಎಸ್. ಬಾಲಸುಬ್ರಹ್ಮಣ್ಯ ಅಯ್ಯರ್, ಪ್ರಧಾನ ಕಾರ್ಯದರ್ಶಿ ಬಿ.ಆರ್. ಉಮೇಶ್ ಶಾಸ್ತ್ರಿ. ಖಜಾಂಚಿ ಕೆ.ಆರ್. ವಿಜಯಕುಮಾರ್, ಸಮಾಜದ ಮುಖಂಡರಾದ ಎಸ್. ಜಿ. ಪ್ರಸಾದ್ ಎಂ.ಪಿ. ಗಣೇಶ್ ಭಟ್, ಆರ್. ವಿಶ್ವನಾಥ್, ಸಂದೀಪ್ ಕೆ.ಎನ್. ಶ್ರೀನಿವಾಸ್ ರಾವ್ , ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ರತ್ನಪ್ರಸಾದ್, ಪ್ರಧಾನ ಕಾರ್ಯದರ್ಶಿ ಸುಧಾ ದೇಶಪಾಂಡೆ, ಖಜಾಂಚಿ ಪದ್ಮ ಮಂಜುನಾಥ್, ವಿಪ್ರ ಸಮಾಜದ ಹಿರಿಯರಾದ ಸರಸ್ವತಿ ರಾಮಗೋಪಾಲ್, ಶಾಂತಾಬಾಯಿ ಉಪಸ್ಥಿತರಿದ್ದರು.