ಸಾರಾಂಶ
ಹಾವೇರಿ: ಸಂಸ್ಕಾರ, ಸಂಘಟನೆ, ಸ್ವಾವಲಂಬನೆ ಎಂಬ ಧ್ಯೇಯದಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಜ. 18 ಹಾಗೂ 19ರಂದು ಬ್ರಾಹ್ಮಣ ಮಹಾಸಮ್ಮೇಳನ ಆಯೋಜಿಸಲಾಗಿದ್ದು, ಜಿಲ್ಲೆಯಿಂದ 4 ಸಾವಿರಕ್ಕೂ ಅಧಿಕ ಸಮಾಜದ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕಿನ ಅಗಡಿಯ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವ ಜನಾಂಗದ ಒಳಿತು ಬಯಸುವ ವಿಪ್ರ ಬಂಧುಗಳ ಸಮಾಗಮ ಇದಾಗಿದೆ. ಮಹಾಸಭಾದ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ಜ. 17ರಂದು ಪೂಜೆ, ಯಾಗ, ಕಳಸ ಸ್ಥಾಪನೆ ಜರುಗಲಿದೆ. 18ರಂದು ಶೃಂಗೇರಿ ಶಾರದಾಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ವಿವಿಧ ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು. ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪ್ರಹ್ಲಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ವಿವಿಧ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.ಪಾಣಿಗ್ರಹಣ ವೇದಿಕೆ ಉದ್ಘಾಟನೆ, ಸ್ಮರಣ ಸಂಚಿಕೆ ಹಾಗೂ ಹಲವು ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಬ್ರಹ್ಮತೇಜ ಪ್ರಶಸ್ತಿ ಪ್ರದಾನ, ಉತ್ತರಾದಿಮಠದ 1008 ಸತ್ಯಾತ್ಮತೀರ್ಥ ಸ್ವಾಮೀಜಿ ಆಶೀರ್ವಚನ, ಸಾಂಸ್ಕತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
19ರಂದು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವೆ ಶೋಭಾ ಕರಂದ್ಲಾಜೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪಾಲ್ಗೊಳ್ಳಲಿದ್ದಾರೆ. ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸುವರು. ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮ, ವಾಣಿಜ್ಯ ಸಮಾವೇಶ ಜರುಗಲಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಾವೇಶ ಸಮಿತಿಯ ರಾಜ್ಯ ಉಪಾಧ್ಯಕ್ಷ ಪವನ್ ಬಹದ್ದೂರ್ ದೇಸಾಯಿ, ಜಿಲ್ಲಾ ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ವಸಂತ ಮೊಕ್ತಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತನಾಯಕ್ ಬಾದಾಮಿ, ಜಿಲ್ಲಾ ಮಹಿಳಾ ಸಂಚಾಲಕಿ ದೀಪಾ ಪಾಟೀಲ, ಸಮ್ಮೇಳನ ಸಮಿತಿ ಜಿಲ್ಲಾ ಸಂಘಟಕ ಸುಬ್ರಹ್ಮಣ್ಯ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ, ತಾಲೂಕು ಕಾರ್ಯದರ್ಶಿ ದತ್ತಾತ್ರೇಯ ಕಳ್ಳಿಹಾಳ, ರಮೇಶ್ ಕುಲಕರ್ಣಿ, ಪ್ರಕಾಶ ಪೂಜಾರ ಇದ್ದರು.ಜಿಲ್ಲೆಯ ಇಬ್ಬರಿಗೆ ಪ್ರಶಸ್ತಿ ಪ್ರದಾನ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ವಿಪ್ರ ಸಮಾಜದ ರಾಜ್ಯಮಟ್ಟದ ಸಮಾವೇಶದಲ್ಲಿ ಜಿಲ್ಲೆಯ ಉದ್ಯಮಿ ಹಾಗೂ ಸಮಾವೇಶ ಸಮಿತಿ ಉಪಾಧ್ಯಕ್ಷ ಪವನ್ ಬಹದ್ದೂರ್ ದೇಸಾಯಿ ಅವರಿಗೆ ನಮ್ಮವರು ನಮ್ಮ ಹೆಮ್ಮೆ ಎಂಬ ಪುರಸ್ಕಾರ ಪ್ರದಾನ ಮಾಡಲಾಗುವುದು. ಅದೇ ರೀತಿ ಪಂ. ಶಂಕರ್ ಭಟ್ ನಾಗೇಶಭಟ್ ಜೋಶಿ ಅವರಿಗೆ ಬ್ರಹ್ಮ ತೇಜ ಎಂಬ ಬಿರುದು ನೀಡಿ ಗೌರವಿಸಲಾಗುತ್ತಿದೆ ಎಂದು ವಿಜಯ್ ನಾಡಜೋಶಿ ತಿಳಿಸಿದರು.ಬ್ರಾಹ್ಮಣ ಸಮಾಜಕ್ಕೆ 11.5 ಗುಂಟೆ ಜಾಗ ಮಂಜೂರು: ಹಾವೇರಿ ಅಜ್ಜಯ್ಯನ ದೇವಸ್ಥಾನ ಸಮೀಪ ಬ್ರಾಹ್ಮಣ ಸಮಾಜಕ್ಕೆ 11.5 ಗುಂಟೆ ಜಾಗ ಖರೀದಿಸಲಾಗಿದೆ. ಈ ಜಾಗದಲ್ಲಿ ಸಮಾಜದ ಮಕ್ಕಳಿಗಾಗಿ ವಸತಿ ನಿಲಯ ಸೌಲಭ್ಯ, ಸಮುದಾಯ ಭವನ ಹಾಗೂ ಶಿವ ಚಿದಂಬರೇಶ್ವರ ದೇವಸ್ಥಾನ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಸಮಾವೇಶ ಮುಗಿದ ಬಳಿಕ ರಾಜ್ಯಾಧ್ಯಕ್ಷರನ್ನು ಆಹ್ವಾನಿಸಿ ಭೂಮಿಪೂಜೆ ನೆರವೇರಿಸಲಾಗುವುದು. ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಸಮಾಜದ ಸ್ವಂತ ಕಟ್ಟಡ ಇದಾಗಲಿದೆ ಎಂದು ವಿಜಯ್ ನಾಡಜೋಶಿ ಹೇಳಿದರು.