ಸಾರಾಂಶ
ಸೀತೂರಿನಲ್ಲಿ ಕುದುರೆಗುಂಡಿ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಪ್ರಥಮ ವರ್ಷದ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಹಿಳೆಯರು ಬ್ರಾಹ್ಮಣ ಸಂಪ್ರದಾಯ, ಆಚಾರ, ವಿಚಾರವನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಸೀತೂರಿನ ಯಕ್ಷಗಾನ ಕಲಾವಿದ ಅನಂತಪದ್ಮನಾಭ ಸಲಹೆ ನೀಡಿದರು.
ಭಾನುವಾರ ಸೀತೂರಿನ ವಿ.ಎಸ್.ಎಸ್.ಎಸ್.ನ ಅನಂತರಾಮ ಉಪಾಧ್ಯ ಸಭಾಂಗಣದಲ್ಲಿ ಕುದುರೆಗುಂಡಿ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾಜದಲ್ಲಿ ಬ್ರಾಹ್ಮಣರಿಗೆ ವಿಶೇಷವಾದ ಗೌರವ ಇದೆ. ಬ್ರಾಹ್ಮಣ ಮಹಿಳೆಯರು ಸಂಘಟಕರಾಗಿ ಗಾಯಿತ್ರಿ ಮಹಿಳಾ ಬಳಗ ಸ್ಥಾಪನೆ ಮಾಡಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿರುವುದು ಶ್ಲಾಘನೀಯವಾಗಿದೆ. ಮಹಿಳೆಯರು ಭಜನೆ, ಭಗವದ್ಗೀತೆಯನ್ನು ಪಠಣ ಮಾಡಬೇಕು ಎಂದರು.ನಮ್ಮ ಸಂಪ್ರದಾಯದಂತೆ ಹಬ್ಬಗಳ ಆಚರಣೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಅನೇಕ ಜನ್ಮದ ಫಲದಿಂದ ಬ್ರಾಹ್ಮಣ ಜನ್ಮ ಬಂದಿದ್ದು ಬ್ರಾಹ್ಮಣರು ಸಂಪ್ರದಾಯ ಬಿಡಬಾರದು. ಪ್ರತಿ ಸಂಪ್ರದಾಯಕ್ಕೂ ವೈಜ್ಞಾನಿಕ ಕಾರಣಗಳಿವೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತ ಪ್ರಭಾಕರ್ ಮಾತನಾಡಿ, ಕಳೆದ ಒಂದು ವರ್ಷದಲ್ಲಿ 27 ರಿಂದ 28 ಕಾರ್ಯಕ್ರಮ ನಡೆಸಿದ್ದೇವೆ. ಎಲ್ಲಾ ಸದಸ್ಯರ ಸಹಕಾರವೇ ಇದಕ್ಕೆಮುಖ್ಯ ಕಾರಣವಾಗಿದೆ. ಸಂಸ್ಕಾರ, ಸಂಘಟನೆ, ಸ್ವಾವಲಂಬನೆಯೇ ನಮ್ಮ ಬಳಗದ ಉದ್ದೇಶವಾಗಿದೆ ಎಂದರು.ಸೀತೂರು ವಿ.ಎಸ್.ಎಸ್.ಎನ್.ಅಧ್ಯಕ್ಷ ಯಡಗೆರೆ ಸುಬ್ರಮಣ್ಯ ಮಾತನಾಡಿ, ಗಾಯಿತ್ರಿ ವಿಪ್ರ ಮಹಿಳಾ ಬಳಗದವರು ಕುಟುಂಬದ ನಿರ್ವಹಣೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಅಲ್ಲದೆ ಆಯಾ ಕಾಲಮಾನಕ್ಕೆ ತಕ್ಕಂತೆ ಅಡುಗೆ ಮಾಡುವ ವಿಧಾನದ ಬಗ್ಗೆಯೂ ಮಹಿಳೆಯರಿಗೆ ತರಬೇತಿ ನೀಡಬಹುದು ಎಂದು ಸಲಹೆ ನೀಡಿದರು.
ಹಿರಿಯರಾದ ಕೊನೋಡಿಯ ಲಕ್ಷ್ಮೀದೇವಿ ರಾಮಚಂದ್ರ ಉದ್ಘಾಟಿಸಿದರು. ಗಾಯಿತ್ರಿ ವಿಪ್ರ ಮಹಿಳಾ ಬಳಗದ ಕಾರ್ಯದರ್ಶಿ ಸುಮ ನಾರಾಯಣಮೂರ್ತಿ ಹಾಗೂ ಸಂಘಟನಾ ಕಾರ್ಯದರ್ಶಿ ಪಲ್ಲವಿ ಪ್ರಶಾಂತ್ ವರದಿ ವಾಚನ ಮಾಡಿದರು. ಯಡಗೆರೆ ಮಂಜುನಾಥ್ ಮಾತನಾಡಿದರು. ಶಾಂತಿ ಅನಿಸಿಕೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಜ್ಯೋತಿ ಸ್ವಾಗತಿಸಿದರು. ಶಮ ಹಾಗೂ ವೀಣಾ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳ ವಂದಿಸಿದರು. ನಂತರ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.