ಕುಶಾಲನಗರದಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟನೆ

| Published : Apr 21 2025, 12:57 AM IST

ಕುಶಾಲನಗರದಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರದಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಪ್ರತಿಭಟನಾ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸಿಇಟಿ ಪರೀಕ್ಷೆ ಬರೆಯಲು ತೆರಳಿದ ಸಂದರ್ಭ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆದು ಅವಮಾನಿಸಿದ ಪ್ರಕರಣವನ್ನು ಖಂಡಿಸಿ ಕುಶಾಲನಗರದಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

ಏಪ್ರಿಲ್ 16 ರಂದು ಬೀದರ್ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿ ಧರಿಸಿದ್ದ ಜನಿವಾರವನ್ನು ತೆಗೆಯಲು ತಿಳಿಸಿದ್ದಲ್ಲದೆ ಅವರ ಮನಸ್ಸಿಗೆ ಆಘಾತ ಉಂಟು ಮಾಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರೀಕ್ಷೆ ಬರೆಯಲು ಅವಕಾಶ ನೀಡದೆ ಭವಿಷ್ಯ ದ ಜೊತೆ ಚೆಲ್ಲಾಟ ಆಡಿರುವ ಅಧಿಕಾರಿ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗೆ ಮತ್ತೆ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ ಎಸ್ ರಾಜಶೇಖರ್ ಒತ್ತಾಯಿಸಿದರು.

ಕುಶಾಲನಗರ ಗಣಪತಿ ದೇವಾಲಯದ ಮುಂಭಾಗ ಸೇರಿದ ಸಂಘದ ಪ್ರಮುಖರು ಸದಸ್ಯರು ಹಾಗೂ ಪಟ್ಟಣದ ಅರ್ಚಕ ಸಮುದಾಯದ ಸದಸ್ಯರು ಹಿಂದೂ ಧರ್ಮದ ಮೇಲೆ ಧಾರ್ಮಿಕ ನಂಬಿಕೆಗೆ ಅಪಮಾನ ಎಸಗಿರುವ ವ್ಯಕ್ತಿಗಳ ವಿರುದ್ಧ ಘೋಷಣೆ ಕೂಗಿದರು.

ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರ ವಹಿಸುವಂತೆ ಆಗ್ರಹಿಸಿದರು.

ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ ಎಸ್ ಅನಿಲ್, ಉಪಾಧ್ಯಕ್ಷರಾದ ಕೆ ಕೆ ಸುಬ್ಬ ರಾಮು, ನಿರ್ದೇಶಕರಾದ ಎಂ ವಿ ನಾರಾಯಣ, ರಮಾ ವಿಜಯೇಂದ್ರ, ಕೆ ಎಂ ಗಿರೀಶ್, ಎಂ ವಿ ಸತೀಶ್, ಶಶಿಧರ್, ರಜನಿ ಪ್ರದೀಪ್, ಅರ್ಚಕರಾದ ಆರ್ ಕೆ ನಾಗೇಂದ್ರ ಬಾಬು ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದೇವಾಲಯದಿಂದ ಹೊರಟ ಪ್ರತಿಭಟನಾಕಾರರು ಕುಶಾಲನಗರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಪ್ರತಿಭಟನಾ ಪತ್ರ ಸಲ್ಲಿಸಿದರು.