ಸಾರಾಂಶ
ಹಾಸನ: 1975ರ ಕುಟುಂಬ ಯೋಜನೆ ಕಾಯಿದೆಯನ್ನು ಬ್ರಾಹ್ಮಣರು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದಲೇ ಸಮುದಾಯದ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಸಮುದಾಯದ ಸಂತತಿಯನ್ನು ಹೆಚ್ಚಿಸಲು ಪ್ರತಿಯೊಂದು ಬ್ರಾಹ್ಮಣ ಕುಟುಂಬವೂ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್ ಕರೆ ನೀಡಿದ್ದಾರೆ.
ನಗರದ ಬಬ್ಬೂರುಕಮ್ಮೆ ಸೇವಾ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಮುದಾಯ ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಮುಖ ಸಲಹೆಗಳನ್ನು ನೀಡಿದ ಅವರು, ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಬ್ರಾಹ್ಮಣರು ಯಾವಾಗಲೂ ದೇಶದ ಕಾನೂನುಗಳನ್ನು ಪಾಲಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಹಾಗಾಗಿಯೇ ನಮ್ಮ ಸಂಖ್ಯೆ ಕುಸಿಯುತ್ತಿದೆ. "ನಾವಿಬ್ಬರು, ನಮಗಿಬ್ಬರು " ಎಂಬ ಘೋಷವಾಕ್ಯ ಇದೀಗ ’ನಾವಿಬ್ಬರೇ’ ಎಂಬಂತಾಗಿದೆ ಎಂದ ಅವರು, ಸಮುದಾಯದಲ್ಲಿ ಏಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಜನಸಂಖ್ಯೆ ಹೆಚ್ಚಸಿಕೊಳ್ಳುವಂತೆ ಕರೆ ನೀಡಿದರು.ಸಭೆಯಲ್ಲಿ ಮಾತನಾಡಿದ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಎ.ವಿಪ್ರಸನ್ನ, ಬ್ರಾಹ್ಮಣ ಸಮುದಾಯದಲ್ಲಿ ಹೆಚ್ಚಿನ ಏಕತೆಯ ಅಗತ್ಯವನ್ನು ಪ್ರತಿಪಾದಿಸಿ, ಮುಂಬರುವ ಸರ್ಕಾರಿ ಸಮೀಕ್ಷೆಗಳಲ್ಲಿ ನಿಖರ ಪ್ರಾತಿನಿಧ್ಯದ ಮಹತ್ವವನ್ನು ಒತ್ತಿ ಹೇಳಿದರು. ತಮ್ಮ ಹೆಸರಿನ ಜೊತೆಗೆ ಗೋತ್ರವನ್ನೂ ಅಳವಡಿಸಿಕೊಳ್ಳುವಂತೆ ಸಲಹೆ ನಿಡಿದ ಅವರು, ಈ ಅಭ್ಯಾಸದಿಂದ ಉಪಪಂಗಡಗಳ ನಡುವಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗಿ, ಬ್ರಾಹ್ಮಣ ಸಮುದಾಯದಲ್ಲಿ ಐಕ್ಯತೆ ಮೂಡುತ್ತದೆ. ಬ್ರಾಹ್ಮಣ ಸಮುದಾಯವು ಪ್ರಸ್ತುತ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ ಎಂಬುದನ್ನು ರಘುನಾಥ್ ಒಪ್ಪಿಕೊಂಡರು. ಈ ಸವಾಲುಗಳನ್ನು ಎದುರಿಸಲು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯು ೧೦೦ ಕೋಟಿ ರುಪಾಯಿಗಳ ನಿಧಿಯನ್ನು ಸಂಗ್ರಹಿಸುವ ಕಾರ್ಯವನ್ನು ಆರಂಭಿಸಲಿದೆ ಎಂದು ಘೋಷಿಸಿದರು. ಜಾತಿ ಗಣತಿಯಲ್ಲಿ ನಿಖರ ಪ್ರಾತಿನಿಧ್ಯಕ್ಕೆ ’ಬ್ರಾಹ್ಮಣ’ ಎಂದಷ್ಟೇ ನಮೂದಿಸಲು ಕರೆ ನೀಡಿದರು.
ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಕೂಡ ಬ್ರಾಹ್ಮಣರ ಜನಸಂಖ್ಯೆಯನ್ನು ಕಡಿಮೆ ಅಂದಾಜು ಮಾಡುವ ಪ್ರವೃತ್ತಿ ನಿರಂತರವಾಗಿ ನಡೆಯುತ್ತಿದೆ. ರಾಜ್ಯ ಸರ್ಕಾರದ ಮುಂಬರುವ ಜಾತಿ ಗಣತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಸನ್ನ ಅವರು ಎಲ್ಲಾ ಬ್ರಾಹ್ಮಣರಿಗೆ ನಿರ್ಣಾಯಕ ಮನವಿ ಮಾಡಿದರು. ಸಮೀಕ್ಷೆ ಪ್ರಕ್ರಿಯೆಯ ಸಮಯದಲ್ಲಿ ತಮ್ಮನ್ನು ಕೇವಲ "ಬ್ರಾಹ್ಮಣ " ಎಂದು ಮಾತ್ರ ಗುರುತಿಸಿಕೊಳ್ಳಬೇಕು ಮತ್ತು ತಮ್ಮ ನಿರ್ದಿಷ್ಟ ಉಪಪಂಗಡಗಳು ಅಥವಾ ಉಪಜಾತಿಗಳನ್ನು ನಮೂದಿಸುವುದನ್ನು ತಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ರಾಷ್ಟ್ರಹಿತವು ಯಾವಾಗಲೂ ಜಾತಿಯ ಪರಿಗಣನೆಗಳನ್ನು ಮೀರಿರಬೇಕು ಎಂಬ ಮೂಲಭೂತ ತತ್ವವನ್ನು ಒತ್ತಿ ಹೇಳಿದ ಅವರು, ಬ್ರಾಹ್ಮಣ ಸಮುದಾಯವು ಐತಿಹಾಸಿಕವಾಗಿ ರಾಷ್ಟ್ರದ ಕಲ್ಯಾಣಕ್ಕೆ ಆದ್ಯತೆ ನೀಡಿದೆ ಎಂದು ನೆನಪಿಸಿದ ಅವರು, ಈ ಸಂಪ್ರದಾಯವನ್ನು ಮುಂದುವರಿಸಲು ಒತ್ತಾಯಿಸಿದರು. "ಜಾತಿಯ ನಿಷ್ಠೆಗಳು ರಾಷ್ಟ್ರದ ಬಗೆಗಿನ ನಮ್ಮ ಬದ್ಧತೆಯನ್ನು ಎಂದಿಗೂ ಮರೆಮಾಡಬಾರದು ಎಂದು ಅವರು ಒತ್ತಿ ಹೇಳಿದರು. ಬ್ರಾಹ್ಮಣರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಒಳಗೊಳ್ಳುವಿಕೆ ಮತ್ತು ಸಕ್ರಿಯ ಪಾತ್ರ ವಹಿಸುವಂತೆ ಅವರು ಕರೆ ನೀಡಿದರು.ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಾಗೂ ಹಿರಿಯ ದಂಪತಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಮಧ್ಯಾಹ್ನ ಬಬ್ಬೂರುಕಮ್ಮೆ ಮಹಿಳಾ ಸಂಘದ ವತಿಯಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಭೆಯಲ್ಲಿ ಬಬ್ಬೂರುಕಮ್ಮೆ ಸೇವಾ ಸಂಘದ ಅಧ್ಯಕ್ಷ ಕೆ.ಎಸ್. ನಾಗರಾಜ್, ಸದಸ್ಯ ರಾಜೇಂದ್ರ ಮತ್ತು ಬೆಂಗಳೂರು ಬಬ್ಬೂರುಕಮ್ಮೆ ಸಂಘದ ಕಾರ್ಯದರ್ಶಿ ಸತ್ಯಪ್ರಕಾಶ್ ಸೇರಿದಂತೆ ಹಲವು ಗಣ್ಯರು ಇದ್ದರು.