ಅ.25ರಂದು ನಗರದಲ್ಲಿ ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಚಿಂತನ- ಮಂಥನ ಸಭೆ ಅಯೋಜಿಸಲಾಗಿದೆ ಎಂದು ಟ್ರಸ್ಟಿ ಡಿ.ಜಗನ್ನಾಥ ಸಾಗ‌ರ್ ಹೇಳಿದರು.

ಕನ್ನಡ ಪ್ರಭ ವಾರ್ತೆ ಚಾಮರಾಜನಗರ

ಅ.25ರಂದು ನಗರದಲ್ಲಿ ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಚಿಂತನ- ಮಂಥನ ಸಭೆ ಅಯೋಜಿಸಲಾಗಿದೆ ಎಂದು ಟ್ರಸ್ಟಿ ಡಿ.ಜಗನ್ನಾಥ ಸಾಗ‌ರ್ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಭಾನುವಾರ ನಗರದ ಎಲ್‌ಐಸಿ ಕಚೇರಿ ಹಿಂಭಾಗದಲ್ಲಿರುವ ಹೋಟೆಲ್ ನಂದಿ ಇನ್‌ ಸಭಾಂಗಣದಲ್ಲಿ ನಡೆಯುವ ಚಿಂತನ- ಮಂಥನ ಸಭೆಯ ದಿವ್ಯಸಾನ್ನಿಧ್ಯವನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಆಯ್ಯನ ಸರಗೂರುಮಠದ ಶ್ರೀ ಮಹಾದೇವ ಸ್ವಾಮಿಗಳು, ಮಂಗಲ ಗ್ರಾಮದ 88 ಗಡಿಕಟ್ಟೆ ಗ್ರಾಮಾಂತರ ಆಚಾರ ವಿಚಾರಣೆ ಅಧಿಪತಿ ಶ್ರೀ ಮಂಜುನಾಥ ಸ್ವಾಮೀಜಿ ವಹಿಸುವವರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಸಭೆ ಉದ್ಘಾಟಿಸುವವರು ಎಂದು ಹೇಳಿದರು. .

ಶ್ರೀಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಪಿ.ಶಿವಶಂಕ‌ರ್ ಅಧ್ಯಕ್ಷತೆ ವಹಿಸುವವರು. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರವೀಂದ್ರ, ಟ್ರಸ್ಟಿನ ಪ್ರಧಾನ ಮಹಾಪೋಷಕ ವೆಂಕಟೇಶ್ ಎಚ್.ಬಂಡಿ, ಎಂ.ಎಸ್.ಲೋಕೇಶ್, ಎಚ್.ಎನ್.ವಿಜಯಕುಮಾರ್, ಮಹಾಪೋಷಕ ಎಚ್.ಆರ್.ಕೃಷ್ಣಪ್ಪ ಭಾಗವಹಿಸಲಿದ್ದಾರೆ ಎಂದರು.

ಉಪ್ಪಾರ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು, ವಿದ್ಯಾರ್ಥಿನಿಲಯ, ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸುವುದು, ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಕ್ಕೆ ಮೊದಲನೇ ಆದ್ಯತೆ ನೀಡುವುದು. ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಶೈಕ್ಷಣಿಕ ದತ್ತು ಯೋಜನೆ ಹಮ್ಮಿಕೊಳ್ಳುವುದು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ಶಿಕ್ಷಣ, ತರಬೇತಿ ಪಡೆಯಲು ಮಾರ್ಗದರ್ಶನ ನೀಡುವುದು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗ ದರ್ಶನ ನೀಡುವುದು. ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಸೌಲಭ್ಯ ಮತ್ತು ಆದ್ಯತೆಯ ಮೇಲೆ ನೆರವು ನೀಡುವುದು ಎಂದು ತಿಳಿಸಿದರು.

ಉಪ್ಪಾರ ಸಮಾಜದಲ್ಲಿ ಇನ್ನೂ ಆಳವಾಗಿ ಬೇರೂರಿರುವ ಅಂಧ ಶ್ರದ್ಧೆ ಮತ್ತು ಮೌಢ್ಯಗಳ ನಿರ್ಮೂಲನೆಗಾಗಿ ಶ್ರಮಿಸುವುದು. ಶೈಕ್ಷಣಿಕ ಅಭಿವೃದ್ಧಿಗಾಗಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ/ವಿವಿಧ ಕ್ಷೇತ್ರಗಳ ಉಪ್ಪಾರ ಜನಾಂಗದ ಸಾಧಕರನ್ನು ಸನ್ಮಾನಿಸುವ ಮೂಲಕ ವಿದ್ಯಾರ್ಥಿಗಳು ಸಾಧಕರನ್ನು ಅನುಕರಣೆ ಮಾಡಲು ಉತ್ತೇಜಿಸುವುದು ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ಉದ್ದೇಶ ವಾಗಿದೆ ಎಂದರು.

ಈಗಾಗಲೇ ಟ್ರಸ್ಟ್ ವತಿಯಿಂದ 380ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ನೆರವು ನೀಡಿದ್ದು, ಅದರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 89 ಪ್ರತಿಭಾವಂತ ಬಡ ಮಕ್ಕಳಿಗೆ ₹14 ಲಕ್ಷ ಆರ್ಥಿಕ ನೆರವು ನೀಡಲಾಗಿದೆ ಎಂದರು.

ಟ್ರಸ್ಟಿ, ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಟ್ರಸ್ಟಿ ನರಸಿಂಹಮೂರ್ತಿ, ಟ್ರಸ್ಟಿನ ದಾನಿಗಳಾದ ಬಿ.ಸ್ವಾಮಿ, ಸಿ.ರಾಜ, ಟ್ರಸ್ಟಿನ ವಲಯ ಕಾರ್ಯದರ್ಶಿ ಸೋಮಶೇಖರಪ್ಪ ಇತರರು ಹಾಜರಿದ್ದರು.