ಸಾರಾಂಶ
ಹನೂರು: ಬ್ರೇಕ್ ವಿಫಲಗೊಂಡು ಬೋರ್‌ವೆಲ್ ವಾಹನ ಪಲ್ಟಿಯಾಗಿರುವ ಘಟನೆ ಜರುಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ಸರಹದ್ದಿನ ಪಾಲರ್ ರಸ್ತೆಯಲ್ಲಿ ಬೋರ್‌ವೆಲ್ ವಾಹನ ಬ್ರೇಕ್ ವಿಫಲಗೊಂಡು ಪಲ್ಟಿಯಾದ ಘಟನೆ ಮಂಗಳವಾರ 12:30 ರಲ್ಲಿ ಜರುಗಿದೆ. ಮಹಾರಾಷ್ಟ್ರದಿಂದ ತಮಿಳುನಾಡಿನ ಸೇಲಂ ಜಿಲ್ಲೆಯ ಗೊಂಡಮಲೆ ಗ್ರಾಮಕ್ಕೆ ತೆರಳುವ ವೇಳೆ ಘಟನೆ ಜರುಗಿದೆ. ಚಾಲಕ ಜ್ಯೋತಿವೇಲು ಸಣ್ಣಪುಟ್ಟ ಗಾಯಗಳಾಗಿ ಮಲೆ ಮಹದೇಶ್ವರ ಬೆಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಮಲೆ ಮಾದೇಶ್ವರ ಬೆಟ್ಟದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಭಾರೀ ವಾಹನಗಳಿಗೆ ನಿಷೇಧ: ಮಲೆ ಮಾದೇಶ್ವರ ಬೆಟ್ಟ ರಸ್ತೆಯಲ್ಲಿ ಹಲವಾರು ಅಪಘಾತಗಳು ಒಳಗಾಗಿ ಜಿಲ್ಲಾಡಳಿತ ಈ ರಸ್ತೆಯಲ್ಲಿ ಭಾರೀ ವಾಹನಗಳಿಗೆ ನಿಷೇಧ ಹೇರಿದೆ. ಆದರೂ ಈ ಭಾಗದಲ್ಲಿ ಬೋರ್‌ವೆಲ್ ವಾಹನವೊಂದು ತಮಿಳುನಾಡಿಗೆ ಹೋಗಲು ಬಂದು ರಸ್ತೆಯಲ್ಲಿ ತೀವ್ರ ತಿರುವಿನ ಬಳಿ ಬ್ರೇಕ್ ವಿಫಲಗೊಂಡು ಪಲ್ಟಿಯಾಗಿದೆ. ಪಾಲಾರ್ ರಸ್ತೆಯಲ್ಲಿ ನಿಷೇಧಿತ ವಾಹನ ಪಲ್ಟಿಯಾಗಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಈ ಭಾಗದಲ್ಲಿ ಸಂಚರಿಸುವ ಭಾರೀ ವಾಹನ ಸವಾರನ್ನು ಪೊಲೀಸ್ ಇಲಾಖೆ, ಸಂಪೂರ್ಣವಾಗಿ ನಿಷೇಧ ಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.