ಮಿಥುನ್ ಕೊಡೆತ್ತೂರುಗೆ ‘ಬ್ರಾಂಡ್ ಮಂಗಳೂರು’ ಪ್ರಶಸ್ತಿ ಪ್ರದಾನ

| Published : Jun 28 2024, 12:48 AM IST

ಸಾರಾಂಶ

ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಕೋಮು ಸೌಹಾರ್ದ ಸ್ಥಾಪಿಸುವ ನಿಟ್ಟಿನಲ್ಲಿ ಬ್ರಾಂಡ್ ಮಂಗಳೂರು ಪ್ರಶಸ್ತಿ ಕೊಡುತ್ತಿರುವುದು ಒಳ್ಳೆಯ ವಿಚಾರ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸೌಹಾರ್ದ ಮಂಗಳೂರು ಸ್ಥಾಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಬ್ರಾಂಡ್ ಮಂಗಳೂರು 2024ನೇ ಪ್ರಶಸ್ತಿಯನ್ನು ಹೊಸದಿಗಂತ ಪತ್ರಿಕೆ ವರದಿಗಾರ ಮಿಥುನ್ ಕೊಡೆತ್ತೂರು ಅವರಿಗೆ ಪ್ರದಾನ ಮಾಡಲಾಯಿತು.

ನಗರದ ಪತ್ರಿಕಾ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಈ ಸಂದರ್ಭ ಮಾತನಾಡಿದ ಅಗರ್ವಾಲ್‌, ಪ್ರತಿಯೊಂದು ಕಡೆಯಲ್ಲೂ ಪಾಸಿಟಿವ್ ಮತ್ತು ನೆಗೆಟಿವ್ ಅಭಿಪ್ರಾಯ ಇದ್ದೇ ಇರುತ್ತದೆ. ನಾವು ನೋಡುವ ರೀತಿ ಪಾಸಿಟಿವ್ ಆಗಿದ್ದರೆ ಎಲ್ಲವೂ ಪಾಸಿಟಿವ್ ಆಗಿಯೇ ಗೋಚರಿಸುತ್ತದೆ. ಮಂಗಳೂರು ಅನ್ನುವುದೇ ಒಂದು ದೊಡ್ಡ ಬ್ರಾಂಡ್. ಬೇರೆ ಕಡೆಗಿಂತ ಇಲ್ಲಿನ ಜನರು ಭಿನ್ನವಾಗಿದ್ದಾರೆ. ಕಳೆದೆರಡು ದಶಕಗಳಿಂದ ಇಲ್ಲಿ ಕೋಮು ಗಲಭೆ, ವೈಷಮ್ಯ ಬೆಳೆದಿದೆ. ಇದನ್ನು ಮಟ್ಟಹಾಕಲು ಪತ್ರಕರ್ತರ ನೆರವು ಅಗತ್ಯ. ಪಾಸಿಟಿವ್ ವರದಿಗಳ ಅಗತ್ಯವಿದೆ. ಆ ಕೆಲಸವನ್ನು ಮಾಡುವ ಪತ್ರಕರ್ತರಿಗೆ ಪ್ರಶಸ್ತಿ ನೀಡುವುದು ಖುಷಿಯ ವಿಚಾರ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಿಥುನ್ ಕೊಡೆತ್ತೂರು, ಸಮಾಜದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ದೇವಸ್ಥಾನಗಳಿಗೆ ಹೂವು ಕೊಂಡೊಯ್ಯುವಾಗ ಅದನ್ನು ಮುಸ್ಲಿಮರು ಅಥವಾ ಕ್ರೈಸ್ತರು ಬೆಳೆದಿದ್ದಾರೆಯೇ ಎಂದು ನೋಡುವುದಿಲ್ಲ. ಅದೇ ರೀತಿ ತಿನ್ನುವ ಅನ್ನ ಯಾರು ಬೆಳೆದಿದ್ದಾರೆ ಅನ್ನೋದು ತಿಳಿದಿರುವುದಿಲ್ಲ. ಎಲ್ಲವೂ ನಮ್ಮಲ್ಲಿನ ಚಿಂತನೆಯಲ್ಲಿ ಅಡಕವಾಗಿರುತ್ತದೆ ಎಂದು ಹೇಳಿದರು.ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಕೋಮು ಸೌಹಾರ್ದ ಸ್ಥಾಪಿಸುವ ನಿಟ್ಟಿನಲ್ಲಿ ಬ್ರಾಂಡ್ ಮಂಗಳೂರು ಪ್ರಶಸ್ತಿ ಕೊಡುತ್ತಿರುವುದು ಒಳ್ಳೆಯ ವಿಚಾರ ಎಂದರು.ವೇದಿಕೆಯಲ್ಲಿ ಕ್ಯಾ. ಗಣೇಶ್ ಕಾರ್ಣಿಕ್, ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ, ಆಯುಷ್ ಇಲಾಖೆಯ ಮುಹಮ್ಮದ್ ಇಕ್ಬಾಲ್, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ತೀರ್ಪುಗಾರ ಹರ್ಷ ಮತ್ತಿತರರು ಇದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿಎನ್ ನಿರೂಪಿಸಿ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.ಫೋಟೊ

27ಬ್ರ್ಯಾಂಡ್‌