ಏಪ್ರಿಲ್ 30ರವರೆಗೆ ಜಿಲ್ಲೆಯಲ್ಲಿ ಜಮೀನು ಸರ್ವೆ, ಹದ್ದುಬಸ್ತು, ನಕ್ಷೆ, ಪೋಡಿ ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ.
ಪರವಾನಗಿ ಭೂಮಾಪಕರ ಮುಷ್ಕರ । 15 ಸಾವಿರಕ್ಕೂ ಹೆಚ್ಚು ಅರ್ಜಿಗಳಿಗೆ ಗ್ರಹಣ । ಸರ್ವೆ ಕಾರ್ಯಕ್ಕೆ ಹಿನ್ನಡೆ, ರೈತರ ಆರ್ಥಿಕ ಮೂಲಕ್ಕೂ ಪೆಟ್ಟು
ಎಂ. ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರ
ಪರವಾನಗಿ ಹೊಂದಿದ ಭೂಮಾಪಕರು ಎರಡೂವರೆ ತಿಂಗಳಿಂದ ಮುಷ್ಕರದ ಹಾದಿ ಹಿಡಿದಿರುವುದರಿಂದ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಬಹುತೇಕ ಕೆಲಸಗಳು ಸ್ಥಗಿತಗೊಂಡಿರುವುದರಿಂದ 15 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇದರಿಂದಾಗಿ ಸಾರ್ವಜನಿಕರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.ಏಪ್ರಿಲ್ 30ರವರೆಗೆ ಜಿಲ್ಲೆಯಲ್ಲಿ ಜಮೀನು ಸರ್ವೆ, ಹದ್ದುಬಸ್ತು, ನಕ್ಷೆ, ಪೋಡಿ ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಜಮೀನು, ನಿವೇಶನ ಖರೀದಿ, ಹಕ್ಕು ಬದಲಾವಣೆಗೂ ತೊಡಕುಂಟಾಗಿದೆ. ಈ ಎಲ್ಲ ಭೂಮಾಪನ ಕಾರ್ಯಗಳು ಸಂಪೂರ್ಣವಾಗಿ ನಿಂತಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.
ಅತಿ ಹೆಚ್ಚು ಕನಕಪುರ ತಾಲೂಕಿನಲ್ಲಿ 3659 ಹಾಗೂ ಅತಿ ಕಡಿಮೆ ಹಾರೋಹಳ್ಳಿ ತಾಲೂಕಿನಲ್ಲಿ 2,041 ಅರ್ಜಿಗಳು ಬಾಕಿ ಇವೆ. ಉಳಿದಂತೆ ರಾಮನಗರ ತಾಲೂಕಿನಲ್ಲಿ 3178, ಚನ್ನಪಟ್ಟಣ ತಾಲೂಕಿನಲ್ಲಿ 2973 ಹಾಗೂ ಮಾಗಡಿ ತಾಲೂಕಿನಲ್ಲಿ 3504 ಅರ್ಜಿಗಳು ವಿಲೇವಾರಿಗೊಂಡಿಲ್ಲ.ಜಿಲ್ಲೆಯಲ್ಲಿ 173 ಪರವಾನಗಿ ಮತ್ತು 35 ಸರ್ಕಾರಿ ಭೂ ಮಾಪಕರು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಸೇವಾ ಭದ್ರತೆಗಾಗಿ ಖಾಸಗಿ ಭೂ ಮಾಪಕರು ಮುಷ್ಕರಕ್ಕೆ ಇಳಿದಿರುವುದರಿಂದ ಕೆಲಸದ ಒತ್ತಡ ಸರ್ಕಾರಿ ಭೂ ಮಾಪಕರ ಮೇಲೆ ಬಿದ್ದಿದೆ. ಲಭ್ಯವಿರುವ 34 ಸರ್ಕಾರಿ ಭೂ ಮಾಪಕರಲ್ಲಿ ಆಕಾರ್ ಬಂದ್, ಸರ್ವೆ ಹಾಗೂ ಸ್ವಾಮಿತ್ವಾ ಯೋಜನೆಗಳಿಗೆ ನಿಯೋಜಿಸಲಾಗಿದೆ.
ಈ ಮೊದಲು ನಾಡ ಕಚೇರಿಗೆ ಅರ್ಜಿ ಸಲ್ಲಿಕೆಯಾದರೆ 23 ದಿನದೊಳಗೆ ಸ್ಕೆಚ್ ರೆಡಿ ಮಾಡಿ ಭೂ ಮಾಪಕರು ಕೊಡುತ್ತಿದ್ದರು. ತಿಂಗಳಿಗೆ 4500 ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದರು. ಆದರೀಗ ಪರವಾನಗಿ ಭೂ ಮಾಪಕರ ಮುಷ್ಕರದಿಂದಾಗಿ ತಮ್ಮ ಕೆಲಸ– ಕಾರ್ಯಗಳಾಗದೆ ಅರ್ಜಿದಾರರು ಪರಿತಪಿಸುವಂತಾಗಿದೆ.ರೈತರ ಆರ್ಥಿಕ ಮೂಲಕ್ಕೆ ಪೆಟ್ಟು:
ಸರ್ಕಾರದ ನಿಯಮದಂತೆ ಒಬ್ಬ ಭೂಮಾಪಕರು ತಿಂಗಳಿಗೆ 23 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲು ಸಾಧ್ಯವಿದೆ. ಈಗಿನ ಪರಿಸ್ಥಿತಿಯಲ್ಲಿ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ವರ್ಷಗಳೇ ಬೇಕಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಈ ಸಮಸ್ಯೆ ಕೇವಲ ಕಚೇರಿ ಕೆಲಸಕ್ಕೆ ಸೀಮಿತವಾಗಿಲ್ಲ. ನೇರವಾಗಿ ರೈತರ ಆರ್ಥಿಕ ಮೂಲಕ್ಕೆ ಪೆಟ್ಟು ನೀಡಿದೆ.ಈಗ ಬಿಸಿಲಿನ ತಾಪಕ್ಕೆ ತೆಂಗಿನ ತೋಟ ಸೇರಿ ಇತರೆ ಬೆಳೆಗಳು ಒಣಗುತ್ತಿವೆ. ಅಂತರ್ಜಲ ಕುಸಿತದಿಂದಾಗಿ ಹೊಸ ಬೋರ್ ವೆಲ್ ಕೊರೆಸಬೇಕಾದ ಅನಿವಾರ್ಯತೆ ರೈತರಿಗಿದೆ. ಆದರೆ, ಬೋರ್ ವೆಲ್ ಕೊರೆಸಲು ಹಣದ ಅಗತ್ಯವಿದ್ದು, ಬ್ಯಾಂಕ್ ಸಾಲ ಪಡೆಯಬೇಕಾದರೆ ಜಮೀನಿನ ಸ್ಕೆಚ್ ಮತ್ತು ಪೋಡಿ ದಾಖಲೆ ಅಗತ್ಯ. ದಾಖಲೆಗಳಿಲ್ಲದೆ ಬ್ಯಾಂಕ್ ಸಾಲ ದೊರೆಯದೆ, ಅತ್ತ ತೋಟಕ್ಕೆ ನೀರುಣಿಸಲೂ ಸಾಧ್ಯವಾಗದೆ ರೈತರು ದಿಕ್ಕೆಟ್ಟಿದ್ದಾರೆ.
...ಕೋಟ್ ...ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿರುವ 173 ಸರ್ಕಾರಿ ಪರವಾನಗಿ ಭೂ ಮಾಪಕರ ಮುಷ್ಕರದಿಂದಾಗಿ ಇಲಾಖೆಯ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಇಲಾಖೆಯ 34 ಸರ್ಕಾರಿ ಭೂ ಮಾಪಕರೇ ಕಾರ್ಯ ನಿರ್ವಹಿಸುತ್ತಿದ್ದು, ಆದ್ಯತೆ ಮೇರೆಗೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.- ಬಿ.ಆರ್. ಹನುಮೇಗೌಡ, ಉಪ ನಿರ್ದೇಶಕ, ಭೂ ದಾಖಲೆಗಳ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ.
...ಕೋಟ್ ...ಮಗಳ ಮದುವೆಗಾಗಿ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ನಿರ್ಧರಿಸಿ ಮುಂಗಡ ಹಣ ಪಡೆದಿದ್ದೆ. ಆದರೆ, ಹದ್ದುಬಸ್ತು ಮತ್ತು ಪೋಡಿ ಪ್ರಕ್ರಿಯೆ ನಡೆಯದ ಕಾರಣ ಕ್ರಯಪತ್ರ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಖರೀದಿದಾರರು ಹಣ ವಾಪಸ್ ಕೇಳುತ್ತಿದ್ದಾರೆ. ಭೂ ಮಾಪಕರ ಮುಷ್ಕರಿಂದಾಗಿ ತೊಂದರೆ ಅನುಭವಿಸುವಂತಾಗಿದೆ.
- ಶಿವಕುಮಾರ್, ಮಾಗಡಿ....ಬಾಕ್ಸ್ ...ಯಾವ್ಯಾವ ಸೇವೆಗಳು ಸ್ಥಗಿತ :ಪರವಾನಗಿ ಭೂ ಮಾಪಕರ ಮುಷ್ಕರದಿಂದಾಗಿ ಭೂ ಮಾಪನ ಇಲಾಖೆಯ 11ಇ ನಕ್ಷೆ (ದಾನ, ವಿಭಾಗ, ಕ್ರಯ), ತತ್ಕಾಲ್ ಪೋಡಿ, ಭೂ ಪರಿವರ್ತನೆ ನಕ್ಷೆ, ಹದ್ದುಬಸ್ತು, ಕೋರ್ಟ್ ಆದೇಶ ಪೋಡಿ ಮತ್ತು 11ಇ, ಪೋಡಿ ಮುಕ್ತ ಕಡತಗಳು, ಇ–ಸ್ವತ್ತು, ತಕರಾರುಗಳು, ಪೂರ್ವ ಅನುದಾನ ನಕ್ಷೆ, ಸ್ವಾಮಿತ್ವ ಯೋಜನೆ, ಸರ್ಕಾರಿ ಜಾಗಗಳ ಅಳತೆ (ಕೆರೆ, ಕಟ್ಟೆ, ದೇವಸ್ಥಾನ, ಸ್ಮಶಾನ), ಕೆಪಿಟಿಸಿಎಲ್ ಮತ್ತು ಇತರ ಸಂಸ್ಥೆಗಳ ಕೆಲಸಗಳು, ಭದ್ರಾ ಮೇಲ್ದಂಡೆ ಯೋಜನೆ, ರಸ್ತೆ–ನಾಲಾ ನಕ್ಷೆ ತಯಾರಿಕೆ, ಅರಣ್ಯ ಅಳತೆ, ದರಖಾಸ್ತು ಪೋಡಿ (6–10), ಡಿಜಿಟಲೀಕರಣ (ಸ್ಕ್ಯಾನಿಂಗ್ ಮತ್ತು ಅಪ್ಲೊಡಿಂಗ್), ದಾಖಲೆ ಪುನರ್ ನಿರ್ಮಾಣ, ದುರಸ್ತಿ ಮತ್ತು ಅಟ್ಲಾಸ್ ನಕ್ಷೆಗಳು, ಮನೆ ಮನೆಗೆ ಹಕ್ಕು ವಿತರಣೆ ಸೇರಿದಂತೆ 18 ಬಗೆಯ ಸೇವೆಗಳು ಸ್ಥಗಿತಗೊಂಡಿವೆ.5ಕೆಆರ್ ಎಂಎನ್ 1.ಜೆಪಿಜಿ
ಸಾದಂರ್ಭಿಕ ಚಿತ್ರ