ಕಾಂಗ್ರೆಸ್‌ ಸೊಕ್ಕು ಮುರಿಯಿರಿ -ವಿಜಯೇಂದ್ರ

| Published : May 04 2024, 12:31 AM IST

ಕಾಂಗ್ರೆಸ್‌ ಸೊಕ್ಕು ಮುರಿಯಿರಿ -ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಶಾಸಕರೂ ಆಗಿರುವ ಸಚಿವ ಶಿವರಾಜ ತಂಗಡಗಿ, ಮೋದಿ ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ ಹಾಕಿಸುವ ಮೂಲಕ ಸೊಕ್ಕು ಮುರಿಯಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಕಾರಟಗಿ: ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿಗೆ ಮತ ಹಾಕುವ ಮೂಲಕ ಜಿಲ್ಲೆಯಲ್ಲಿ ದುರಾಡಳಿತ ನಡೆಸಿ, ಅಧಿಕಾರದ ಮದದಲ್ಲಿ ಇರುವವರ ಸೊಕ್ಕು ಮುರಿಯಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದ ರೋಡ್ ಶೋ ಆನಂತರ ನವಲಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಸ್ಥಳೀಯ ಶಾಸಕರೂ ಆಗಿರುವ ಸಚಿವ ಶಿವರಾಜ ತಂಗಡಗಿ, ಮೋದಿ ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ ಹಾಕಿಸುವ ಮೂಲಕ ಸೊಕ್ಕು ಮುರಿಯಬೇಕಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಅವರ ಎರಡೂ ಕೆನ್ನೆಗೂ ಬಾರಿಸಿ ಎಂದು ಕರೆನೀಡಿದರು.

ಸಚಿವರು ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ. ಅಂಥವರ ಹೆಸರು ಹೇಳುವುದಕ್ಕೂ ನಾನು ಇಷ್ಟ ಪಡುವುದಿಲ್ಲ. ಈ ಸಚಿವರ ಸೊಕ್ಕು-ದುರಹಂಕಾರ ಮುರಿಯಬೇಕಿದೆ. ದೀಪ ಆರುವಾಗ ಹೆಚ್ಚು ಉರಿಯುತ್ತದೆ ಎನ್ನುವಂತೆ ಕಾಂಗ್ರೆಸ್ ನಾಯಕರು ಉರಿಯುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರ ಸೊಕ್ಕು ಅಡಗಲಿದ್ದು, ಅವರ ಪುಂಗಿ ಬಂದ್ ಆಗಲಿದೆ. ನರೇಂದ್ರ ಮೋದಿ ೩ನೇ ಬಾರಿಗೆ ಪ್ರಧಾನಿ ಆಗುವುದನ್ನು ತಡೆಯೋಕೆ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಇದು ಬಿಜೆಪಿ ಟಿಕೆಟ್ ಸಿಗದೆ ಪಕ್ಷ ಬಿಟ್ಟು ಹೋಗಿರುವವರಿಗೂ ತಕ್ಕ ಪಾಠ ಆಗಲಿದೆ ಎಂದು ಹರಿಹಾಯ್ದರು.

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್, ಮಾಜಿ ಶಾಸಕ ಬಸವರಾಜ ಧಡೇಸುಗೂರ, ಶಾಸಕಿ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಇದ್ದರು.

ಬೃಹತ್ ರೋಡ್ ಶೋ: ವಾಣಿಜ್ಯ ಪಟ್ಟಣ ಕಾರಟಗಿಯಲ್ಲಿ ಶುಕ್ರವಾರ ಸಂಜೆ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರ ಬೃಹತ್ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಮುಖಂಡರು ಮತಯಾಚನೆ ಮಾಡಿದರು. ಈ ವೇಳೆ ಪಕ್ಷದ ನಾಯಕರಿಗೆ ಬೃಹತ್ ಹಾರವನ್ನು ಕ್ರೇನ್ ಮೂಲಕ ಹಾಕಲಾಯಿತು.

ತಂಗಡಗಿ ಪಕ್ಷೇತರನಾಗಿ ಗೆದ್ದಿದ್ದು ನನ್ನ ದುಡ್ಡಿನಲ್ಲಿ-ಜನಾರ್ದನ ರೆಡ್ಡಿ

ಸಚಿವ ಶಿವರಾಜ ತಂಗಡಗಿ ಇಂದು ನನ್ನ ವಿರುದ್ಧವೇ ಮಾತನಾಡುತ್ತಿದ್ದಾನೆ. ಆದರೆ, ಆತ ಮೊದಲು ಪಕ್ಷೇತರನಾಗಿ ಗೆದ್ದಿದ್ದು ನನ್ನ ದುಡ್ಡಿನಿಂದ ಎನ್ನುವುದನ್ನು ಮರೆತಿದ್ದಾನೆ ಎಂದು ಶಾಸಕ ಜನಾರ್ದನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರ ಮತಯಾಚನೆಯ ರೋಡ್ ಶೋದಲ್ಲಿ ಅವರು ಮಾತನಾಡಿದರು.ಬಿಜೆಪಿ ಟಿಕೆಟ್ ಕೊಟ್ಟಿಲ್ಲ ಅಂತ ಬಳ್ಳಾರಿಯ ನನ್ನ ಮನೆಗೆ ಬಂದು ದುಡ್ಡು ತಗೊಂಡು ಬಂದು ಪಕ್ಷೇತರನಾಗಿ ನಿಂತು ಗೆದ್ದಿದ್ದ. ಅವನನ್ನು ಯಡಿಯೂರಪ್ಪ ಅವರ ಬಳಿಕ ಕರೆದುಕೊಂಡು ಹೋಗಿ ಮಂತ್ರಿ ಮಾಡಿದ್ದು ನಾನು. ಕನಕಗಿರಿ ಕ್ಷೇತ್ರದ ವಿಷಯದಲ್ಲಿ ನಾನು ಮಾಡಿದ ಈ ಎರಡು ತಪ್ಪುಗಳು ಎಂದು ಜನಾರ್ದನ ರೆಡ್ಡಿ ವಿಷಾದಿಸಿದರು.

ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ ರೆಡ್ಡಿ, ಏ ತಮ್ಮಾ ತಂಗಡಗಿ, ಈಗ ನಾನು ಕಾರಟಗಿಯ ಬಸ್ ನಿಲ್ದಾಣದಲ್ಲಿದ್ದೀನಿ, ಸಾವಿರಾರು ಜನ ಮೋದಿ ಮೋದಿ ಅಂತಿದ್ದಾರೆ. ಬಂದು ಕಪಾಳಕ್ಕೆ ಹೊಡಿ, ನೋಡೋಣ ಎಂದು ಸವಾಲು ಹಾಕಿದರು.ಶಿವರಾಜ ತಂಗಡಗಿ ನನ್ನ ಬೆತ್ತಲೆ ಮಾಡ್ತೀನಿ ಅಂತ ಹೇಳಿದ್ದಾನೆ, ಲೇ ತಮ್ಮಾ ತಂಗಡಗಿ, ನಿನ್ನ ಕಾಂಗ್ರೆಸ್ ನಾಯಕರು ನನ್ನನ್ನು ನಾಲ್ಕು ವರ್ಷ ಜೈಲಲ್ಲಿ ಇಟ್ಟು ಏನೂ ಮಾಡ್ಕೊಳೊಕಾಗಿಲ್ಲ, ನೀನು ಭಾಳ ಎಚ್ಚರಿಕೆಯಿಂದ ಮಾತಾಡಬೇಕು ಎಂದು ಎಚ್ಚರಿಸುತ್ತ, ೨೦೨೮ರಲ್ಲಿ ಶಿವರಾಜ ತಂಗಡಗಿ ಡೆಪಾಸಿಟ್ ಕಳಕೊಳ್ಳೋ ಹಾಗೆ ಮಾಡಬೇಕು ಎಂದು ಜನತೆಗೆ ಕರೆನೀಡಿದರು.