ಸಾರಾಂಶ
ಚನ್ನಪಟ್ಟಣ: ತಾಲೂಕಿನ ಕೂಡ್ಲೂರು ರಸ್ತೆಯಲ್ಲಿನ ಶಿಶಿರಾ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ್ದ ಬಾಡೂಟವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡ ಘಟನೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಆಯೋಜಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುಮಾರು ೨ ಸಾವಿರ ಜನಕ್ಕೆ ಭರ್ಜರಿ ಬಾಡೂಟ ತಯಾರಿಸಲಾಗಿತ್ತು. ಚಿಕನ್ ಬಿರಿಯಾನಿ, ಗೀರೈಸ್, ಮಟನ್ ಛಾಪ್ಸ್, ಚಿಕನ್ ಕಬಾಬ್, ಅನ್ನ ತಿಳಿಸಾರು ಸಿದ್ಧಪಡಿಸಲಾಗಿತ್ತು. ಆದರೆ, ಏಕಾಏಕಿ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸಭೆಗೆ ಆಗಮಿಸಿದ ಚುನಾವಣಾಧಿಕಾರಿಗಳು ಬಾಡೂಟಕ್ಕೆ ಬ್ರೇಕ್ ಹಾಕಿದರು.ಸಭೆ ನಡೆಯುತ್ತಿದ್ದ ವೇಳೆ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಾಡೂಟ ತಯಾರಿಸಿರುವುದನ್ನು ಖಚಿತಪಡಿಸಿಕೊಂಡರು. ಬಳಿಕ ಚುನಾವಣಾಧಿಕಾರಿ ಬಿನೋಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ ಸಿದ್ಧಪಡಿಸಿದ್ದ ಊಟವನ್ನು ಪಾತ್ರೆ ಸಮೇತ ಸೀಜ್ ಮಾಡಿದರು. ಅಧಿಕಾರಿಗಳು ಸೀಜ್ ಮಾಡಿದ ಬಳಿಕ ಊಟ ಹಿಂದಿರುಗಿಸುತ್ತಾರೆ ಎಂದು ಭಾವಿಸಿ ನೂರಾರು ಮಂದಿ ಅಡುಗೆ ಮನೆಯ ಹೊರಗೆ ಕಾದು ನಿಂತಿದ್ದರು. ಆದರೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು.
ಊಟ ಆರಂಭಕ್ಕೆ ಮುನ್ನಾ ಚುನಾವಣಾಧಿಕಾರಿಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರು ಬಾಡೂಟ ಬಿಟ್ಟು ಬರೀ ನೀರು ಕುಡಿದು ಹಿಂದಿರುಗುವಂತಾಯಿತು.ಆಹಾರ ಪದಾರ್ಥ ನಾಶ: ಚುನಾವಣೆ ಹಿನ್ನೆಲೆಯಲ್ಲಿ ಮಾಡಿದ್ದ ಆಹಾರ ಪದಾರ್ಥವನ್ನು ವಶಪಡಿಸಿಕೊಂಡ ಚುನಾವಣಾಧಿಕಾರಿಗಳು ಎಲ್ಲಾ ಆಹಾರವನ್ನು ನಾಶಪಡಿಸಿ, ಅಡುಗೆಗೆ ಬಳಸಿದ್ದ ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಮೇಲೆ ನಡೆಸುವ ಸಭೆಗಳಲ್ಲಿ ಕಾಫಿ, ಟೀ, ಮಜ್ಜಿಗೆ, ನೀರು ವಿತರಣೆಗೆ ಮಾತ್ರ ಅವಕಾಶವಿತ್ತು. ಆದರೆ, ಬಾಡೂಟ ಸಿದ್ಧಪಡಿಸಿರುವ ಹಿನ್ನೆಲೆಯಲ್ಲಿ ಸಭೆಯ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಟೋ೧೬ಸಿಪಿಟಿ೩: ಬಿಜೆಪಿ ಸಭೆಯ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ್ದ ಬಾಡೂಟವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವುದು.ಪೊಟೋ೧೬ಸಿಪಿಟಿ೪: ಅಡುಗೆ ಮನೆಯ ಮುಂದೆ ಜಮಾಯಿಸಿದ್ದ ಜನ.