ಆರಂಭಿಕ ತಪಾಸಣೆಗಾಗಿ ಹುಮನ ಪೀಪಲ್ ಟು ಪೀಪಲ್ ಇಂಡಿಯಾ ಸಂಸ್ಥೆ ಮತ್ತು ಇಂಡಸ್ ಸೇತು ಸಂಸ್ಥೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ 2025ರ ಫೆಬ್ರವರಿಯಿಂದ ಡಿಸೆಂಬರ್ ಅವಧಿಯಲ್ಲಿ ಸ್ವಸ್ಥ ಸೇತು- ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಯೋಜನೆಯನ್ನು ಜಾರಿಗೆ ತರಲಾಯಿತು.
ಬಳ್ಳಾರಿ: ನಿಯಮಿತ ತಪಾಸಣೆ ಮತ್ತು ಆರಂಭಿಕ ಚಿಕಿತ್ಸೆಯಿಂದ ಸ್ತನ ಕ್ಯಾನ್ಸರ್ ನ್ನು ತಡೆಗಟ್ಟಬಹುದಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಸ್ಥ ಸೇತು ಆರೋಗ್ಯ ಸೇತುವೆ ಯೋಜನೆಯಡಿ ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆಯ 2025-26ನೇ ಸಾಲಿನ ವಾರ್ಷಿಕ ಮೌಲ್ಯಮಾಪನ ವರದಿಯ ಯೋಜನೆಯ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಗ್ರಾಮೀಣ ಮತ್ತು ನಗರ ಸಮುದಾಯಗಳಲ್ಲಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರನ್ನು ತಡವಾಗಿ ಪತ್ತೆಹಚ್ಚುವಿಕೆ ಹಾಗೂ ಇದರಿಂದಾಗುವ ಹಾನಿ ತಡೆಗಟ್ಟಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಜಾಗೃತಿ ಹಾಗೂ ಆರಂಭಿಕ ತಪಾಸಣೆಗಾಗಿ ಹುಮನ ಪೀಪಲ್ ಟು ಪೀಪಲ್ ಇಂಡಿಯಾ ಸಂಸ್ಥೆ ಮತ್ತು ಇಂಡಸ್ ಸೇತು ಸಂಸ್ಥೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ 2025ರ ಫೆಬ್ರವರಿಯಿಂದ ಡಿಸೆಂಬರ್ ಅವಧಿಯಲ್ಲಿ ಸ್ವಸ್ಥ ಸೇತು- ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಯೋಜನೆಯನ್ನು ಜಾರಿಗೆ ತರಲಾಯಿತು.
ಈ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 537 ಆಶಾ ಕಾರ್ಯಕರ್ತೆಯರಿಗೆ ಸಮುದಾಯಗಳಲ್ಲಿ ತಪಾಸಣೆ ಕೈಗೊಳ್ಳುವ ಕುರಿತು ತರಬೇತಿ ನೀಡಲಾಗಿತ್ತು. ಅವರು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸುಮಾರು 1,50,000 ಮಹಿಳೆಯರನ್ನು ತಪಾಸಣೆಗೆ ಒಳಪಡಿಸಿದ್ದರು. ಅದರಲ್ಲಿ 1,20,204 ಮಹಿಳೆಯರು ಸ್ವಯಂ ಪರೀಕ್ಷೆ ಕೈಗೊಂಡಿದ್ದರು. 42 ಮಹಿಳೆಯರು ಅನುಮಾನಾಸ್ಪದ ಲಕ್ಷಣಗಳೊಂದಿಗೆ ಗುರುತಿಸಲಾಗಿದೆ. ಇವರಲ್ಲಿ 35 ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಅದರಲ್ಲಿ 15 ಜನ ಮಹಿಳೆಯರಿಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 20 ಜನ ಮಹಿಳೆಯರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ದೃಢಪಟ್ಟ ಮಹಿಳೆಯರಿಗೆ ಆರಂಭಿಕವಾಗಿ ಜಿಲ್ಲಾ ಆಸ್ಪತ್ರೆ, ಬಿಎಂಸಿಆರ್ ಸಿ ಆಸ್ಪತ್ರೆಗಳಲ್ಲಿ ಆರಂಭಿಕ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು ಮತ್ತು ಜಿಲ್ಲೆಗೆ ಹತ್ತಿರವಾಗುವ ಅಂತರ್ ರಾಜ್ಯದ ಹೈದ್ರಬಾದ್ ನಲ್ಲಿರುವ ಆಸ್ಪತ್ರೆಗೂ ಸಹ ಚಿಕಿತ್ಸೆಗೆ ಅನುಗುಣವಾಗಿ ಕಳುಹಿಕೊಡಲು ತೆಲಂಗಾಣದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು.ಬಳ್ಳಾರಿ ಜಿಲ್ಲೆ ಮಾದರಿಯಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಕಾರ್ಯವನ್ನು ಎಲ್ಲಾ ಜಿಲ್ಲೆಗಳಿಗೆ ಮತ್ತು ತಾಲ್ಲೂಕುಗಳಿಗೆ ವಿಸ್ತರಣೆಯ ಕುರಿತು ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರೊಂದಿಗೆ ಚರ್ಚಿಸಲಾಗುವುದು ಎಂದರು.ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ವಾರ್ಷಿಕವಾರು ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಕಾರ್ಯವು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸುದೈವದ ಸಂಗತಿಯಾಗಿದೆ. ಈ ಯೋಜನೆಗೆ ಮಾತೃ ದೇವೋಭವ ಎಂದು ನಾಮಕರಣ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿದರು. ಮೇಯರ್ ಪಿ.ಗಾದೆಪ್ಪ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ, ಬಿಎಂಸಿಆರ್‌ಸಿ ನಿರ್ದೇಶಕ ಡಾ.ಗಂಗಾಧರ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಉಪಸ್ಥಿತರಿದ್ದರು.