ತಾಯಿಯ ಎದೆ ಹಾಲು ಪ್ರತಿ ಮಗುವಿಗೆ ಸದೃಢ ಆರೋಗ್ಯದ ಜತೆಗೆ ಮಾನಸಿಕ ಬೆಳವಣಿಗೆಗೂ ಸಹಕಾರಿ : ಜಿಲ್ಲಾಧಿಕಾರಿ ದಿವ್ಯಪ್ರಭು

| Published : Aug 08 2024, 01:45 AM IST / Updated: Aug 08 2024, 09:56 AM IST

ತಾಯಿಯ ಎದೆ ಹಾಲು ಪ್ರತಿ ಮಗುವಿಗೆ ಸದೃಢ ಆರೋಗ್ಯದ ಜತೆಗೆ ಮಾನಸಿಕ ಬೆಳವಣಿಗೆಗೂ ಸಹಕಾರಿ : ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಮಗುವಿನ ಜನನಕ್ಕೆ ತಾಯಿಯಷ್ಟು ಕಾರಣ ತಂದೆಯೂ ಆಗುತ್ತಾನೆ. ಇಷ್ಟಾಗಿಯೂ ಪ್ರತಿ ಮಗುವಿಗೆ ತಂದೆಗಿಂತ ತಾಯಿ ಪ್ರೀತಿ, ಭಾವನೆ ಹೆಚ್ಚಿರುತ್ತದೆ. ತಾಯಿಯ ಎದೆ ಹಾಲಿನ ಪರಿಣಾಮವೇ ಇದಕ್ಕೆ ಕಾರಣ.

ಧಾರವಾಡ:  ಎದೆ ಹಾಲನ್ನು ಒಂದು ಉತ್ಪನ್ನ ಎಂದು ತಿಳಿಯದೇ ಅದು ತಾಯಿಯ ಪ್ರೀತಿ ಎನ್ನಬೇಕು. ತಾಯಿಯ ಎದೆ ಹಾಲು ಪ್ರತಿ ಮಗುವಿಗೆ ಸದೃಢ ಆರೋಗ್ಯದ ಜತೆಗೆ ಮಾನಸಿಕ ಬೆಳವಣಿಗೆಗೂ ಸಹಕಾರಿ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಇಲ್ಲಿಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್‌ ಸಹಯೋಗದಲ್ಲಿ ಸ್ಥಾಪಿಸಿರುವ ಅಮೃತ ಮಿಲ್ಕ್‌ ಬ್ಯಾಂಕ್‌ 2ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿ, ಒಂದು ಮಗುವಿನ ಜನನಕ್ಕೆ ತಾಯಿಯಷ್ಟು ಕಾರಣ ತಂದೆಯೂ ಆಗುತ್ತಾನೆ. ಇಷ್ಟಾಗಿಯೂ ಪ್ರತಿ ಮಗುವಿಗೆ ತಂದೆಗಿಂತ ತಾಯಿ ಪ್ರೀತಿ, ಭಾವನೆ ಹೆಚ್ಚಿರುತ್ತದೆ. ತಾಯಿಯ ಎದೆ ಹಾಲಿನ ಪರಿಣಾಮವೇ ಇದಕ್ಕೆ ಕಾರಣ. ತಾಯಿ-ಮಗುವಿನ ಸಂಬಂಧ ಬೆಳೆಯುವುದು ಎದೆ ಹಾಲಿನಿಂದಲೇ ಎಂದರು.

ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಮಗುವಿಗೆ ಪ್ರತಿಯೊಬ್ಬ ತಾಯಿ ಹಾಲುಣಿಸಬೇಕು. ಕೊರತೆ ಎದುರಿಸುತ್ತಿರುವ ಮಕ್ಕಳಿಗೆ ಇಂತಹ ಬ್ಯಾಂಕ್‌ಗಳ ಮೂಲಕ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ತಾಯಂದಿರು ತಮ್ಮಲ್ಲಿರುವ ಹೆಚ್ಚುವರಿ ಹಾಲನ್ನು ದಾನ ಮಾಡುವ ಮೂಲಕ ಶಿಶುಗಳ ಆರೋಗ್ಯ ವೃದ್ಧಿಸಲು ಕಾರಣವಾಗಬೇಕು. ತಾಯಿ ಹಾಲು ದಾನದ ವಿಷಯವಾಗಿ ಇನ್ನಷ್ಟು ಜಾಗೃತಿ ಮೂಡಬೇಕಿದೆ ಎಂದು ದಿವ್ಯಪ್ರಭು ಅಭಿಪ್ರಾಯಪಟ್ಟರು.

ಎಸ್‌ಡಿಎಂ ವಿವಿ ಕುಲಪತಿ ಡಾ. ನಿರಂಜನ ಕುಮಾರ ಅಧ್ಯಕ್ಷತೆ ವಹಿಸಿ ಸಪ್ತಾಹದಲ್ಲಿ ಸ್ತನ್ಯಪಾನ ವಿಚಾರದ ಕುರಿತಾದ ಅನೇಕ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಸ್ತನ್ಯಪಾನದ ಮಹತ್ವ, ಇದರಿಂದ ಮಗುವಿನ ಆರೋಗ್ಯ ಹಾಗೂ ಬೆಳವಣಿಗೆ ಮೇಲಾಗುವ ಸಕಾರಾತ್ಮಕ ಪ್ರಭಾವ, ಮುಂತಾದವುಗಳ ಕುರಿತಾಗಿ ಸಲಹೆ, ಸಹಾಯ ಹಾಗೂ ಸೌಲಭ್ಯಗಳ ಬಗ್ಗೆ ಬಾಣಂತಿಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಎಸ್‌ಡಿಎಂ ವಿವಿ ಕಾರ್ಯನಿರ್ವಾಹಕ ನಿರ್ದೇಶಕರಾದ ಪದ್ಮಲತಾ ನಿರಂಜನ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿದರು. ಪ್ರಾಚಾರ್ಯರಾದ ಡಾ. ರತ್ನಮಾಲಾ ದೇಸಾಯಿ ಇದ್ದರು. ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿಜಯ ಕುಲಕರ್ಣಿ, ರಿಜಿಸ್ಟ್ರಾರ್ ಡಾ. ಚಿದೇಂದ್ರ ಶೆಟ್ಟರ್ ಇದ್ದರು. ತಾಯಿ ಎದೆ ಹಾಲು ದಾನ ಮಾಡಿದ ತಾಯಂದಿರನ್ನು ಗೌರವಿಸಲಾಯಿತು. ರೋಟರಿ ಜಿಲ್ಲಾ ಗವರ್ನರ್‌ ಡಾ. ಪಲ್ಲವಿ ದೇಶಪಾಂಡೆ, ಕ್ಲಬ್‌ ಅಧ್ಯಕ್ಷರಾದ ಗೌರಿ ಮಾದಲಬಾವಿ ಅನಿಸಿಕೆ ಹಂಚಿಕೊಂಡರು.