ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಮಗುವಿಗೆ ತಾಯಿಯ ಎದೆ ಹಾಲು ಉತ್ತಮ ಆಹಾರ. ಇದು ಸುರಕ್ಷಿತ, ಸ್ವಚ್ಛ ಮತ್ತು ಪ್ರತಿಕಾಯಗಳನ್ನು ಹೊಂದಿದ್ದು, ಬಾಲ್ಯದ ಅನೇಕ ಸಾಮಾನ್ಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಭಾರತೀಯ ಮಕ್ಕಳ ತಜ್ಞರ ಸಂಘದ ರಾಜ್ಯ ಅಧ್ಯಕ್ಷ ಡಾ.ಎಸ್.ವ್ಹಿ.ಪಾಟೀಲ ಹೇಳಿದರು.ಪಟ್ಟಣದ ಮೋಗಲಾಯಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಭಾರತೀಯ ಮಕ್ಕಳ ತತ್ಞರ ಸಂಘ, ತಾಲೂಕಾ ಆರೋಗ್ಯ ಇಲಾಖೆ ಮತ್ತು ಮೋಗಲಾಯಿ ಆಸ್ಪತ್ರೆಗಳ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಎದೆ ಹಾಲು ಶಿಶುವಿಗೆ ಮೊದಲ ತಿಂಗಳುಗಳಿಗೆ ಅಗತ್ಯವಿರುವ ಎಲ್ಲಾ ಶಕ್ತಿ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಮಕ್ಕಳ ಬುದ್ದಿಮತ್ತೆ ಇದರಿಂದ ಜಾಸ್ತಿಯಾಗಿ ಮಕ್ಕಳು ಕ್ರಿಯಾಶೀಲರಾಗುತ್ತಾರೆ. ಎದೆಹಾಲುಣಿಸುವ ಮಹಿಳೆಯರಿಗೆ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಬರುವ ಅಪಾಯವೂ ಕಡಿಮೆ ಎಂದರು.ವಿಜಯಪುರದ ಮಕ್ಕಳ ತಜ್ಞ ಡಾ.ಎಸ್.ಎಸ್.ಕಲ್ಯಾಣಶೆಟ್ಟಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಶಾರದಾ ನಾಡಗೌಡರ ಮಾತನಾಡಿ, ಸ್ತನ್ಯಪಾನದ ಬಗ್ಗೆ ಅನೇಕ ತಾಯಂದಿರಲ್ಲಿ ತಪ್ಪು ಕಲ್ಪನೆಗಳಿದ್ದು, ಅವುಗಳನ್ನು ಹೋಗಲಾಡಿಸುವುದೆ ಈ ಸಪ್ತಾಹದ ಉದ್ದೇಶ. ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ನಮ್ಮ ಹಳೆಯ ಸಂಪ್ರದಾಯಗಳು, ಮೂಲ ಕಲ್ಪನೆಗಳು ಮರೆಯಾಗುತ್ತಿವೆ. ಗರ್ಭಧರಿಸಿದ ಮಹಿಳೆಗೆ ಮಗುವಿನ ಬೆಳವಣಿಗೆ ಕುರಿತು ಮಾನಸಿಕವಾಗಿ ನಾವು ಸಿದ್ದತೆ ಮಾಡಬೇಕು. ತಾಯಿಯ ಎದೆಹಾಲು ಮಗುವಿಗೆ ಮಾನಸಿಕ ಮತ್ತು ದೈಹಿಕ ಬೆಳೆವಣಿಗೆಗೆ ಧನಾತ್ಮಕವಾಗಿ ಕಾರಣವಾಗುತ್ತದೆ. ಬಹಳಷ್ಟು ತಾಯಂದಿರು ಎದೆಹಾಲು ಉಣಿಸಲು ಪ್ರಾರಂಭಿಸಿದರೂ ಕೆಲವೇ ತಿಂಗಳುಗಳಲ್ಲಿ ಇತರೆ ಹಾಲು ಮತ್ತು ಪಾನೀಯಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಇದರಿಂದ ಶಿಶು ವಿವಿಧ ಸೋಂಕುಗಳಿಗೆ ಗುರಿಯಾಗಲಿದೆ ಎಂದು ತಿಳಿಸಿದರು.ಈ ವೇಳೆ ಡಾ.ಸಿ.ಎಸ್.ಹಿರೇಗೌಡರ, ಡಾ.ಶಾರದಾ ನಾಡಗೌಡ, ತಾಲೂಕಾ ವೈದ್ಯಾಧಿಕಾರಿ ಡಾ.ಎ.ಎ.ಮಾಗಿ, ಡಾ. ಇಸ್ಮಾಯಿಲ್ ಮೊಗಲಾಯಿ, ಡಾ.ನೂರಾನಿ ಮೊಗಲಾಯಿ, ಡಾ.ಸಾರಂಗ ನಾಡಗೌಡ, ಡಾ.ಸರೋಜಿನಿ ದಾನಗೊಂಡ, ಡಾ.ಸೀಮಾ ವಾರದ, ಡಾ.ಶೃತಿ ಸಜ್ಜನ, ಡಾ.ತೌಶೀಪ್ ನಾಗರಳ್ಳಿ ಇತರರು ಇದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವೈ.ಚೌಡಕಿ ಸ್ವಾಗತಿಸಿದರು, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ನಿರೂಪಿಸಿ ವಂದಿಸಿದರು.