ಸಾರಾಂಶ
ತಾಯಿ ಮಗುವಿಗೆ ಎದೆಹಾಲನ್ನು ನೀಡುವುದರಿಂದ ಮುಂದೆ ಯಾವುದೇ ರೋಗಗಳಿಗೆ ತುತ್ತಾಗದೇ ದೈಹಿಕ ಹಾಗೂ ಮಾನಸಿಕ ಆರೋಗ್ಯವಂತ ಮಗುವಾಗಿ ಬೆಳೆಯಲು ಸಹಕಾರಿಯಾಗಿದೆ
ತಿಪಟೂರು: ತಾಯಿ ಮಗುವಿಗೆ ಎದೆಹಾಲನ್ನು ನೀಡುವುದರಿಂದ ಮುಂದೆ ಯಾವುದೇ ರೋಗಗಳಿಗೆ ತುತ್ತಾಗದೇ ದೈಹಿಕ ಹಾಗೂ ಮಾನಸಿಕ ಆರೋಗ್ಯವಂತ ಮಗುವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಟಿ.ಎಸ್. ಸುಮಿತ್ರಾ ತಿಳಿಸಿದರು.
ತಾಲೂಕಿನ ಮತ್ತಿಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಿಪಟೂರು ಇನ್ನರ್‌ವೀಲ್ ಕ್ಲಬ್ ವತಿಯಿಂದ ಗರ್ಭಿಣಿಯರು ಹಾಗೂ ಬಾಣಂತಿಯರಿಗಾಗಿ ಹಮ್ಮಿಕೊಂಡಿದ್ದ ಸ್ತನ್ಯಪಾನದ ಮಹತ್ವ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿಯ ಎದೆಹಾಲಿನಲ್ಲಿ ಮಗುವಿಗೆ ಬೇಕಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ತಾಯಂದಿರು ತಪ್ಪದೇ ಮಗುವಿಗೆ ಹೆಚ್ಚಿನ ಅವಧಿಯವರೆಗೆ ಎದೆಹಾಲು ಉಣಿಸಬೇಕು. ಕೆಲವು ಮೂಢನಂಬಿಕೆಗಳಿಂದ ತಾಯಿ ತನ್ನ ಮಗುವಿಗೆ ಎದೆಹಾಲನ್ನು ಕೊಡುವುದನ್ನು ತಪ್ಪಿಸುತ್ತಿದ್ದಾರೆ. ಇದು ಮಕ್ಕಳ ಅಪೌಷ್ಟಿಕತೆಗೆ ಒಂದು ಪ್ರಮುಖ ಕಾರಣವಾಗಿದೆ. ತಾಯಂದಿರಿಗೆ ಸ್ತನ್ಯಪಾನದ ಮಹತ್ವ ತಿಳಿಸಲೆಂದು ನಮ್ಮ ಕ್ಲಬ್ ವತಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ತಾಯಂದಿರು ಗರ್ಭಾವಸ್ಥೆಯಲ್ಲಿಯೇ ಉತ್ತಮ ಪೌಷ್ಟಿಕ ಆಹಾರ, ಆರೋಗ್ಯ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಹುಟ್ಟುವಂತಹ ಮಕ್ಕಳು ಆರೋಗ್ಯಯತವಾಗಿ ಒಳ್ಳೆಯ ಸಂಸ್ಕಾರವುಳ್ಳ ಮಕ್ಕಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಹತ್ತಕ್ಕೂ ಹೆಚ್ಚು ಗರ್ಭಿಣಿಯರು, ಮತ್ತು ಬಾಣಂತಿಯರಿಗೆ ತೆಂಗಿನೆಣ್ಣೆ, ಸೋಪು, ಪೌಡರ್, ಹಣ್ಣುಗಳು, ಪೌಷ್ಠಿಕಯುಕ್ತ ಆಹಾರಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷತರ ಕೇಂದ್ರ ಹಿರಿಯ ಸಮಾಲೋಚಕಿ ಪಿ. ರೇಖಾ, ಸಿಡಿಪಿಓ ಇಲಾಖೆಯ ಮೇಲ್ವಿಚಾರಕಿ ಪ್ರೇಮಾ, ಅಂಗನವಾಡಿ ಶಿಕ್ಷಕಿ ಕಮಲ, ಕ್ಲಬ್‌ನ ಉಪಾಧ್ಯಕ್ಷೆ ಜಯಾ ತಂಡಗ, ಐಎಸ್‌ಓ ಕಾತ್ಯಾಯಿನಿ, ಸದಸ್ಯೆ ಪಾರ್ವತಮ್ಮ, ಮಾಜಿ ಅಧ್ಯಕ್ಷರಾದ ಪ್ರೇಮಾ ನಟರಾಜು, ಸುಮನ ಜಯದೇವ್, ಪೂರ್ಣಿಮಾ ಮತ್ತಿತರರಿದ್ದರು.