ಸಾರಾಂಶ
ಬಾದಾಮಿ ವ್ಯಾಪ್ತಿಯಲ್ಲಿ ಬರುವ 24 ನಿವೇಶನಗಳ ಚಾಲ್ತಿ ಉತಾರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಾದಾಮಿ ಪುರಸಭೆಯ ಸಿಪಾಯಿ ಕಂ ಬಿಲ್ ಕಲೆಕ್ಟರ್ ಲಕ್ಷ್ಮಣ ಶಿಕ್ಕಲಗಾರ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾದಾಮಿ ವ್ಯಾಪ್ತಿಯಲ್ಲಿ ಬರುವ 24 ನಿವೇಶನಗಳ ಚಾಲ್ತಿ ಉತಾರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಾದಾಮಿ ಪುರಸಭೆಯ ಸಿಪಾಯಿ ಕಂ ಬಿಲ್ ಕಲೆಕ್ಟರ್ ಲಕ್ಷ್ಮಣ ಶಿಕ್ಕಲಗಾರ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಪ್ರಸನ್ನ ಪಂಚಪ್ಪ ಹಕ್ಕಾಪಕ್ಕಿ ಅವರು ತಮ್ಮ ಅಜ್ಜನ ಮಾಲ್ಕಿಯಲ್ಲಿರುವ ಬಾದಾಮಿ ಗ್ರಾಮದ ಸರ್ವೇ ನಂ.586/4ನಲ್ಲಿ ಇದ್ದ ನಂ.286/ಎ/49 ರಿಂದ 286/ಎ/72 ವರೆಗಿನ 24 ನಿವೇಶನಗಳ ಚಾಲ್ತಿ ಉತಾರ ನೀಡಲು 3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಲಕ್ಷ್ಮಣ ಶಿಕ್ಕಲಗಾರ ದಾಳಿ ವೇಳೆ ರೆಡ್ ಹಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ ಚಿಟಗುಬ್ಬಿ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾದೀಕ್ಷಕ ಸಿದ್ದೇಶ್ವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ-1 ಎಂ.ಎಚ್.ಬಿದರಿ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.