ರಾಜ್ಯದಲ್ಲಿ ಭ್ರಷ್ಟಾಚಾರ, ಲಂಚ ಗ್ಯಾರಂಟಿಯ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಮಂತ್ರಿಗಳಿಗೆ ಕಮಿಷನ್‌ ಕೊಡಬೇಕೆಂದು ಅಧಿಕಾರಿಗಳು ಲಂಚ ಸಂಗ್ರಹದಲ್ಲಿ ತೊಡಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ, ಲಂಚ ಗ್ಯಾರಂಟಿಯ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಮಂತ್ರಿಗಳಿಗೆ ಕಮಿಷನ್‌ ಕೊಡಬೇಕೆಂದು ಅಧಿಕಾರಿಗಳು ಲಂಚ ಸಂಗ್ರಹದಲ್ಲಿ ತೊಡಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸಚಿವರೇ ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಇದೀಗ ಬಟಾಬಯಲಾಗಿದೆ. ಆಡಳಿತ ಪಕ್ಷದ ಶಾಸಕರೇ ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿರುವುದು ಇದಕ್ಕೆ ಸ್ಪಷ್ಟಉದಾಹರಣೆ ಎಂದರು.

ರಾಜ್ಯ ಸಚಿವ ಸಂಪುಟದಲ್ಲಿ ಪೇಮೆಂಟ್‌ ಕೋಟಾದಡಿ ಸಚಿವರಾದವರು ಪೇಮೆಂಟ್‌ ಅಧಿಕಾರಿಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯ ಲೋಕಾಯುಕ್ತ ಎನ್‌.ಬಿ. ವೀರಪ್ಪ ಅವರು ಕರ್ನಾಟಕದಲ್ಲಿ 100ರಲ್ಲಿ 63 ಮಂದಿ ಲಂಚ ಕೊಡಬೇಕಾಗಿದೆ ಎಂದು ಹೇಳಿರುವುದು ರಾಜ್ಯದ ಭ್ರಷ್ಟಾಚಾರದ ಕೈಗನ್ನಡಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಲಂಚ ಗ್ಯಾರಂಟಿಯ ಸರ್ಕಾರ ಆಡಳಿತ ನಡೆಸುತ್ತಿರುವುದು ಸ್ಪಷ್ಟವಾಗಿದೆ ಎಂದರು.

ತನಿಖೆ ನಡೆಯಲಿ: ರಾಜ್ಯ ಸರ್ಕಾರದಲ್ಲಿ ಒಂದರ ಹಿಂದೆ ಒಂದು ಭ್ರಷ್ಟಾಚಾರಗಳು ಹೊರಬರುತ್ತಿವೆ. ಪೊಲೀಸ್‌ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯ ಬಿಜೆಪಿ ಪಾದಯಾತ್ರೆ ಆರಂಭಿಸಿದೆ. ಕೆಆರ್‌ಡಿಎಲ್‌ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಬಿಜೆಪಿ ಪ್ರಮುಖರಾದ ಸಂದೀಪ್‌ ಪಚ್ಚನಾಡಿ, ಬಿಜೆಪಿ ಕಚೇರಿ ಕಾರ್ಯದರ್ಶಿ ಗುರುಚರಣ್‌, ಮಾಧ್ಯಮ ಸಂಚಾಲಕ ಅರುಣ್‌ ಶೇಟ್‌ ಇದ್ದರು.