ಸಾರಾಂಶ
ಪೇದೆ ವಿಜಯ್ ಕುಮಾರ್ ಮನೋಹರ್‌ರಿಂದ ಲಂಚ ಪಡೆಯುತ್ತಿರುವುದು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕಳೆದ 19 ದಿನಗಳ ಹಿಂದೆ ಅಪಘಾತವಾಗಿ ಕಾರು ವಶಕ್ಕೆ ಪಡೆದಿದ್ದ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆಯೊಬ್ಬರು, ಆ ಕಾರು ಬಿಡುಗಡೆಗೊಳಿಸಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 6 ಸಾವಿರ ಪಡೆದು ಸಿಕ್ಕಿಬಿದ್ದು ವಿವಾದಕ್ಕೀಡಾಗಿದ್ದಾರೆ. ಗ್ರಾಮಾಂತರ ಠಾಣೆಯ ಪೇದೆ ವಿಜಯ್‌ಕುಮಾರ್ ಲಂಚಕ್ಕಾಗಿ ಬೇಡಿಕೆಯನ್ನು ತಮ್ಮ ಮೊಬೈಲ್‌ನಲ್ಲಿ 10 ಸಾವಿರ ಎಂದು ಟೈಪ್ ಮಾಡಿ ತೋರಿಸಿದರು ಎನ್ನಲಾಗಿದೆ. ಬಳಿಕ 6 ಸಾವಿರ ಪಡೆಯುವ ವೇಳೆ ವಿಡಿಯೋ ದಾಖಲೆ ಸಮೇತ ಸಿಕ್ಕಿಬಿದ್ದಿದ್ದು ದಾಖಲೆ ವಿಡಿಯೋ ಸಮೇತ ದೂರುದಾರ ಮಂಡ್ಯ ಮೂಲದ ಮನೋಹರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.ಏನಿದು ಘಟನೆ?: ಕಳೆದ ಮಾ.24 ರಂದು ಕೊಳ್ಳೇಗಾಲದ ಮಧುವನಹಳ್ಳಿ ಬಳಿ ರಸ್ತೆ ಅಪಘಾತ ನಡೆದಿದ್ದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಜಖಂಗೊಂಡಿದ್ದ ಕಾರು ಬಿಡುಗಡೆಗಾಗಿ ಮಾ.27ಕ್ಕೆ ಕಾರಿನ ಮಾಲಿಕ ಮನೋಹರ್ ಪೊಲೀಸ್ ಠಾಣೆಗೆ ತೆರಳಿದ ವೇಳೆ ಪೇದೆ ವಿಜಯ್ ಕುಮಾರ್ ತಮ್ಮ ಮೊಬೈಲ್‌ನಲ್ಲಿ ಟೈಪ್ ಮಾಡಿ 10ಸಾವಿರ ನೀಡಲೇಬೇಕು, ಇದರಲ್ಲಿ ಪಿಎಸ್ಸೈ ಅವರಿಗೂ ನೀಡಬೇಕು. ನೀವು ಕಡಿಮೆ ಕೊಟ್ಟರೆ ಒಪ್ಪಲ್ಲ ಎಂದು ಕ್ಯಾತೆ ತೆಗೆದರು ಎನ್ನಲಾಗಿದೆ.ನಂತರ ಮನೋಹರ್ 6 ಸಾವಿರ ನೀಡಿ ಕಾರು ರಿಲೀಸ್ ಮಾಡಿಸಿಕೊಂಡರು ಎನ್ನಲಾಗಿದೆ. 6 ಸಾವಿರ ನೀಡುವ ವೇಳೆ ಮೊದಲೇ ಪೇದೆಯ ವರ್ತನೆಗೆ ಬೇಸತ್ತಿದ್ದ ಕಾರು ಮಾಲಿಕ ಹಣ ಪಡೆಯುವ ದೃಶ್ಯ ಸೆರೆಹಿಡಿಯುವ ಮೂಲಕ ವಿಡಿಯೋ ದಾಖಲೆ ಸಮೇತ ಎಸ್ಪಿಯವರಿಗೆ ಪೇದೆ ವಿರುದ್ಧ ಶಿಸ್ತು ಕ್ರಮಕೈಗೊಳ್ಳಿ ಎಂದು ದೂರಿದ್ದಾರೆ. ಅಪಘಾತ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ, ಹಾಗಿದ್ದರೂ ಅಜಾರಗರೂಕತೆ ಎಂದು ಸುಳ್ಳು ದೂರು ದಾಖಲಿಸಿದ್ದು ಅಲ್ಲದೆ ನನ್ನಿಂದ ಲಂಚಕ್ಕಾಗಿ ಬೇಡಿಕೆ ಇಟ್ಟು ತೊಂದರೆ ನೀಡಿದ್ದಾರೆ, ನಾನು ನನ್ನ ಗೆಳೆಯರ ಮೂಲಕ ವಿಡಿಯೋ ಚಿತ್ರಿಕರಣ ಮಾಡಿಸಿ ಲಂಚ ಪಡೆದ ದೃಶ್ಯವನ್ನು ಸಿಡಿಗೆ ನಮೂದಿಸಿ ದೂರು ನೀಡಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನೋಹರ್ ಮನವಿ ಮಾಡಿದ್ದಾರೆ.