ಲಂಚ ಪಡೆದು ಕೆಲಸ: ಅಬಕಾರಿ ಅಧಿಕಾರಿ ಅಮಾನತಿಗೆ ಮನವಿ

| Published : Jun 21 2024, 01:07 AM IST

ಸಾರಾಂಶ

ಅಬಕಾರಿ ಇಲಾಖೆ ಅಧಿಕಾರಿ ಅಮಾನತಿಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎಂಎಸ್ಐಎಲ್‌ನಲ್ಲಿ ಗುತ್ತಿಗೆ ಮೇಲೆ ಕೆಲಸಗಾರರನ್ನು ನೇಮಿಸಲು ಪ್ರತಿಯೊಬ್ಬರಿಂದ ಲಂಚ ಪಡೆದ ಅಬಕಾರಿ ಇಲಾಖೆಯ ಎಂಎಸ್ಐಎಲ್ ಅಧಿಕಾರಿ ಚಂದ್ರಶೇಖರ ಪೋಳ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆಆರ್‌ಎಸ್‌ ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ ಮಾತನಾಡಿ, ವಿಜಯಪುರ ಜಿಲ್ಲೆಯ ಅಬಕಾರಿ ಇಲಾಖೆಯ ಎಂಎಸ್‌ಐಎಲ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಚಂದ್ರಶೇಖರ ಪೋಳ ಅವರು, ಎಂಎಸ್‌ಐಎಲ್ ಮಾರಾಟ ಮಳಿಗೆಗಳಲ್ಲಿ ಗುತ್ತಿಗೆ ಮೇಲೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲು ಪ್ರತಿಯೊಬ್ಬ ನೌಕರರಿಂದ ₹೧.೪ ಲಕ್ಷ ಲಂಚದ ರೂಪದಲ್ಲಿ (ಸುಮಾರು ₹೧.೫ ಕೋಟಿ) ಹಣವನ್ನು ಪಡೆದು ಕೆಲಸವನ್ನು ಕೊಟ್ಟಿದ್ದಾರೆ. ನಂತರ ಪ್ರತಿವರ್ಷ ಶೇ.೬೦ರಷ್ಟು ನೌಕರರಿಗೆ ವರ್ಗಾವಣೆ, ವೇತನ ಕೊಡದೆ ಕಿರುಕುಳ ನೀಡಿ ಕೆಲಸ ಬಿಡುವಂತೆ ಮಾಡಿ ಆ ಸ್ಥಳಕ್ಕೆ ಹೊಸಬರನ್ನು ನೇಮಿಸಲು ಹಣ ಪಡೆದುಕೊಳ್ಳುತ್ತಾರೆ ಎಂದು ದೂರಿದರು.

ಹೀಗೆ ಪ್ರತಿ ವರ್ಷವೂ ೩೦ರಿಂದ ೪೦ ಜನರನ್ನು ಕೆಲಸದಿಂದ ತೆಗೆಯುವುದು ಮತ್ತೆ ಲಂಚ ಪಡೆದು ಕೆಲಸ ಕೊಡುವುದು ಮಾಡುತ್ತಾರೆ. ಇದು ಒಂದು ತಂಡ ರೂಪದಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ ತಾವು ಒಂದು ತನಿಖಾ ತಂಡವನ್ನು ರಚಿಸಿ ತನಿಖೆ ಮಾಡಿ ಹಣ ಕಳೆದುಕೊಂಡಿರುವ ಅಮಾಯಕ ಬಡ ನಿರುದ್ಯೋಗಿಗಳಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ದೀಪಾ ಮನೂರ, ರಾಕೇಶ ಇಂಗಳಗಿ, ವಿಕ್ರಮ ವಾಘಮೋರೆ, ಲಕ್ಷ್ಮಣ ಚಡಚಣ, ಚಂದ್ರಕಾಂತ ನಗರೇ, ಹಮಿದ ಇನಾಮದಾರ, ಪ್ರವೀಣ ಕನಸೇ, ದುರ್ಗಪ್ಪ ಬೂದಿಹಾಳ ಮುಂತಾದವರು ಇದ್ದರು.