ಶಿಗ್ಗಾಂವಿಯಲ್ಲಿ ಲಂಚಮುಕ್ತ ಕರ್ನಾಟಕ ಅಭಿಯಾನ

| Published : Jul 25 2024, 01:21 AM IST

ಸಾರಾಂಶ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಶಿಗ್ಗಾಂವಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಲಂಚಮುಕ್ತ ಕರ್ನಾಟಕ ಅಭಿಯಾನ ನಡೆಸಲಾಯಿತು. ಸಾರ್ವಜನಿಕರ ಸಮಸ್ಯೆ ಆಲಿಸಲಾಯಿತು.

ಶಿಗ್ಗಾಂವಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಶಿಗ್ಗಾಂವಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಲಂಚಮುಕ್ತ ಕರ್ನಾಟಕ ಅಭಿಯಾನ ನಡೆಸಲಾಯಿತು.

ಈ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಕಚೇರಿಗೆ ಕೆಆರ್‌ಎಸ್‌ ಪಕ್ಷದ ನಿಯೋಗ ಭೇಟಿ ನೀಡಿ, ಕಚೇರಿ ವ್ಯವಸ್ಥೆ ಪರಿಶೀಲಿಸಿತು ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸಿತು. ಬಳಿಕ ತಹಸೀಲ್ದಾರ್‌ಗೆ ಲಂಚಮುಕ್ತ ಕರ್ನಾಟಕ ಅಭಿಯಾನದ ಮನವಿ ನೀಡಿತು.

ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರು ಅನೇಕ ಸಮಸ್ಯೆಗಳ ಬಗ್ಗೆ ನಿಯೋಗದ ಗಮನಕ್ಕೆ ತಂದರು. ಬೈಲಪ್ಪ ಬಸಪ್ಪ ಕುಂಬಾರ ಎಂಬ ರೈತ, ಎರಡು ವರ್ಷಗಳ ಹಿಂದೆ ಬೆಂಕಿ ಅನಾಹುತಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪರಿಹಾರ ವಿಳಂಬವಾಗುತ್ತಿದೆ ಎಂದು ಹೇಳಿದರು. ಆಗ ಕೆಆರ್‌ಎಸ್‌ ಪಕ್ಷದ ನಿಯೋಗದ ಸದಸ್ಯರು ಅಧಿಕಾರಿಗಳನ್ನು ಈ ಕುರಿತು ಪ್ರಶ್ನಿಸಿದರು. ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಅರ್ಜಿ ಪರಿಶೀಲನೆ ಮಾಡಿ, ಮುಂದಿನ ವಾರದೊಳಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಕಚೇರಿಯ ಸಿಬ್ಬಂದಿಯ ಗುರುತಿನ ಚೀಟಿ ಮತ್ತು ಅವರು ಕಾರ್ಯ ನಿರ್ವಹಿಸುವ ಕೊಠಡಿಗಳ ಮುಂದೆ ಸಾರ್ವಜನಿಕ ಮಾಹಿತಿ (ದರಪಟ್ಟಿ, ಸೂಚನಾ ಫಲಕ, ಮಾಹಿತಿ ಹಕ್ಕು ಅಧಿನಿಯಮ ಮತ್ತು ಲೋಕಾಯುಕ್ತ) ಬೋರ್ಡ್‌ಗಳನ್ನು ನಿಯೋಗ ಪರಿಶೀಲಿಸಿತು.

ಸಾಕಷ್ಟು ಜನರು ಆಹಾರ ಇಲಾಖೆಯಲ್ಲಿ ರೇಷನ್‌ ಕಾರ್ಡ್ ಪಡೆಯಲು ಅಲೆದಾಡುತ್ತಿರುವುದನ್ನು ನಿಯೋಗದ ಬಳಿ ಹಂಚಿಕೊಂಡರು. ಚೆನ್ನಮ್ಮ ಎಂಬ ಮಹಿಳೆ ನಾನು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಎರಡು ವರ್ಷವಾಗಿದ್ದು, ಇಂದಿಗೂ ಅಲೆದಾಡುತ್ತಿದ್ದೇನೆ ಎಂದು ಹೇಳಿದರು. ಆಗ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ ಅವರು, ಅರ್ಜಿ ಸಲ್ಲಿಸಲು ಪೋರ್ಟಲ್ ತೆರೆಯುವಂತೆ ತಹಸೀಲ್ದಾರರು, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಆಗ್ರಹಿಸಿದರು.

ಆನಂತರ ಕೆಆರ್‌ಎಸ್ ಪಕ್ಷದ ನಿಯೋಗ ಕಚೇರಿಯ ಸ್ವಚ್ಛತೆ ಮತ್ತು ಸಾರ್ವಜನಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿತು.

ರಾಜ್ಯದ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಆದೇಶದಂತೆ ಸರ್ಕಾರಿ ಕಚೇರಿಗಳಲ್ಲಿ ಯಾವೆಲ್ಲ ಸೌಲಭ್ಯಗಳು ಇರಬೇಕು ಮತ್ತು ಅಧಿಕಾರಿಗಳು ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಅನ್ನುವ ಅಂಶಗಳ ಪಟ್ಟಿಯಲ್ಲಿ ಕಂಡು ಬಂದ ಕುಂದು-ಕೊರತೆಗಳ ಹಾಗೂ ಕಚೇರಿಯಲ್ಲಿ ಕಂಡುಬಂದ ನ್ಯೂನತೆಗಳ ಪಟ್ಟಿ ಮಾಡಿ ಶಿಗ್ಗಾಂವಿ ತಹಸೀಲ್ದಾರ್‌ಗೆ ನೀಡಲಾಯಿತು. ತಹಸೀಲ್ದಾರ್‌ ಕಚೇರಿಗೆ ಬಂದುಹೋಗುವ ಸಾರ್ವಜನಿಕರಿಗೆ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ತಹಸೀಲ್ದಾರ್‌ಗೆ ಮನವಿ ನೀಡಲಾಯಿತು.

ರಾಜ್ಯ ಕಾರ್ಯದರ್ಶಿ ಸೋಮಸುಂದರ, ರಾಜ್ಯ ಯುವ ಘಟಕದ ಕಾರ್ಯದರ್ಶಿ ವೆಂಕಟೇಶ್, ಯುವಧ್ವನಿ

ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಮಠದ, ಆನಂದ, ರಮೇಶ್ ಗೌಡ,

ಗಜೇಂದ್ರ ಕುಮಾರ್‌ಗೌಡ, ಹಾವೇರಿ ಜಿಲ್ಲೆಯ ಕಾರ್ಯದರ್ಶಿಗಳಾದ ಧರ್ಮರಾಜು, ಈರಣ್ಣ ಬಾರಕೇರ ಹಾಜರಿದ್ದರು.