ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆ ಅಡಿ ಶಾಲೆಗಳ ಮುಖ್ಯೋಪಾಧ್ಯಾಯರಿಂದ ಪ್ರತಿ ತಿಂಗಳು ಲಂಚದ ರೂಪದಲ್ಲಿ ಹಣ ಸಂಗ್ರಹಿಸುವಂತೆ ಒತ್ತಾಯಿಸಿ, ಕೊನೆಗೆ ಹಣ ಸ್ವೀಕರಿಸುವಾಗ ರಾಯಬಾಗ ತಾಲೂಕು ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಮತ್ತು ವಿಷಯ ನಿರ್ವಾಹಕ ಲೋಕಾಯುಕ್ತ ಪೊಲೀಸ್ ಬಲೆಗೆ ಹಣ ಸಹಿತ ಸಿಕ್ಕಿಬಿದ್ದಿದ್ದಾರೆ.ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಸುಭಾಷ ವಲ್ಲ್ಯಾಪೂರ ಮತ್ತು ಎಫ್‌ಡಿಸಿ (ವಿಷಯ ನಿರ್ವಾಹಕ) ಚಂದ್ರಶೇಖರ ಪೋಳ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿಗಳು. ನಂತರ ಲೋಕಾಯುಕ್ತ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.ರಾಯಬಾಗ ಪಟ್ಟಣದ ನಿವಾಸಿ ರಾಜು ಶಿವರಾಯ ನಾಯಕ ಕಳೆದ 12 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ತಾಲೂಕು ಪಂಚಾಯತ ರಾಯಬಾಗದಲ್ಲಿ ಕೆಲಸ ಮಾಡುತ್ತಿದ್ದರು. ಲಂಚ ಪಡೆದು ಸಿಕ್ಕಿಬಿದ್ದಿರುವ ಸುಭಾಷ ಮತ್ತು ಚಂದ್ರಶೇಖರ ಇಬ್ಬರೂ ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲೆಗಳ ಮುಖ್ಯೋಪಾಧ್ಯಾಯರ ಹೆಸರಿನಲ್ಲಿ ಬಿಡುಗಡೆ ಮಾಡುವ ಪ್ರತಿ ತಿಂಗಳದ ಅನುದಾನಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಸಂಗ್ರಹಿಸಿಕೊಡು ಎಂದು ಕೇಳಿದ್ದಾರೆ. ಆದರೆ, ಈ ರೀತಿ ಲಂಚದ ಹಣ ಸಂಗ್ರಹಿಸಿ ಕೊಡಲು ಸಾಧ್ಯವಿಲ್ಲವೆಂದು ಡಾಟಾ ಎಂಟ್ರಿ ಆಪರೇಟರ್ ರಾಜು ನಾಯಕ ಹೇಳಿದ್ದಾನೆ. ನಂತರ ಇಬ್ಬರೂ ಅಧಿಕಾರಿಗಳು ರಾಜುನನ್ನು ಕೆಲಸದಿಂದ ತೆಗೆದುಹಾಕುತ್ತೇವೆ ಎಂದು ಬೆದರಿಸಿ, ಜಿಪಂ ಬೆಳಗಾವಿ ಹಿರಿಯ ಅಧಿಕಾರಿಗೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ರಾಜು ನಾಯಕ ಇವರು ಮೇಲಾಧಿಕಾರಿಗಳಿಗೆ ಲಂಚದ ಹಣ ಸಂಗ್ರಹಿಸಿಕೊಡುವಂತೆ ಇಟ್ಟ ಬೇಡಿಕೆಯ ಧ್ವನಿ ಮುದ್ರಣವನ್ನು ಮಾಡಿಕೊಂಡು ಮಾ.27, 2025 ರಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ಇನ್ಸ್‌ಪೆಕ್ಟರ್ ನಿರಂಜನ ಪಾಟೀಲ ಅವರು ಪ್ರಕರಣ ದಾಖಲಿಸಿಕೊಂಡರು. ನಂತರ ಈ ದೂರಿನ ಹಿನ್ನೆಲೆಯಲ್ಲಿ ಲಂಚ ಸಂಗ್ರಹಿಸಲು ಒತ್ತಾಯಿಸಿದ ಅಧಿಕಾರಿಗಳಿಬ್ಬರನ್ನು ಟ್ರ್ಯಾಪ್ ಮಾಡಲಾಯಿತು.