ಮಂಡ್ಯ ಲೋಕೋಪಯೋಗಿ ಇಲಾಖೆಯಲ್ಲಿ ಲಂಚಾವತಾರ

| Published : Mar 01 2025, 01:04 AM IST

ಸಾರಾಂಶ

ಕಚೇರಿಯಲ್ಲಿದ್ದ ತಾಂತ್ರಿಕ ಸಹಾಯಕಿ ವಿ.ಶಿಲ್ಪ ಹಾಗೂ ಶುಭಾ ಅವರು ಗುತ್ತಿಗೆದಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕಣ್ಣೀರಿಟ್ಟರು. ಹರ್ಷ ಸೂಚನೆಯಂತೆ ಟೆಂಡರ್ ಅರ್ಜಿ ತಿರಸ್ಕರಿಸಿದ್ದಾಗಿ ವಿ.ಶಿಲ್ಪಾ ಒಪ್ಪಿಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕೋಪಯೋಗಿ ಇಲಾಖೆಯಲ್ಲಿ ಹೊಸ ಬಗೆಯ ಲಂಚಾವತಾರ ಬೆಳಕಿಗೆ ಬಂದಿದೆ. ಕಾಮಗಾರಿ ಗುತ್ತಿಗೆ ನೀಡುವ ಮುನ್ನವೇ ಅಧಿಕಾರಿಗಳಿಗೆ ಲಂಚ ಕೊಡಬೇಕು. ಇಲ್ಲದಿದ್ದರೆ ಟೆಂಡರ್‌ಗೆ ಸಲ್ಲಿಸಿದ ಅರ್ಜಿಯನ್ನೇ ತಿರಸ್ಕರಿಸುವಂತೆ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯುಟೀವ್ ಇಂಜಿನಿಯರ್ ಹರ್ಷ ಫರ್ಮಾನು ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇದರ ವಿರುದ್ಧ ಶುಕ್ರವಾರ ಸಿಡಿದೆದ್ದ ಗುತ್ತಿಗೆದಾರರು, ದುರುದ್ದೇಶದಿಂದ ಗುತ್ತಿಗೆದಾರನೊಬ್ಬನ ಟೆಂಡರ್ ಅರ್ಜಿ ತಿರಸ್ಕೃತಗೊಳಿಸಿದ್ದಕ್ಕೆ ಲೋಕೋಪಯೋಗಿ ಇಲಾಖೆಗೆ ತೆರಳಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಲಂಚ ನೀಡಲಿಲ್ಲವೆಂಬ ಕಾರಣಕ್ಕೆ ಸುರೇಶ್ ಎಂಬ ಗುತ್ತಿಗೆದಾರನ ಅರ್ಜಿಯನ್ನು ಅಧಿಕಾರಿಗಳು ತಿರಸ್ಕೃತಗೊಳಿಸಿದ್ದರು. ಜೆಡಿಎಸ್ ಮುಖಂಡ ರಾಮಚಂದ್ರು ನೇತೃತ್ವದಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಯಾವ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕಾರ ಮಾಡಿದ್ದೀರಿ. ಆ ಬಗ್ಗೆ ಮಾಹಿತಿ ಕೊಡುವಂತೆ ಪಟ್ಟು ಹಿಡಿದರು. ಮಾಹಿತಿ ಕೇಳಲು ಫೋನ್ ಮಾಡಿದರೂ ಎಕ್ಸಿಕ್ಯುಟೀವ್ ಇಂಜಿನಿಯರ್ ಹರ್ಷ ಕರೆ ಸ್ವೀಕರಿಸಲಿಲ್ಲ ಎನ್ನಲಾಗಿದೆ.

ಕಚೇರಿಯಲ್ಲಿದ್ದ ತಾಂತ್ರಿಕ ಸಹಾಯಕಿ ವಿ.ಶಿಲ್ಪ ಹಾಗೂ ಶುಭಾ ಅವರು ಗುತ್ತಿಗೆದಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕಣ್ಣೀರಿಟ್ಟರು. ಹರ್ಷ ಸೂಚನೆಯಂತೆ ಟೆಂಡರ್ ಅರ್ಜಿ ತಿರಸ್ಕರಿಸಿದ್ದಾಗಿ ವಿ.ಶಿಲ್ಪಾ ಒಪ್ಪಿಕೊಂಡರು. ಅದನ್ನು ಲಿಖಿತ ರೂಪದಲ್ಲಿ ಬರೆದುಕೊಡುವಂತೆ ಗುತ್ತಿಗೆದಾರರು ಪಟ್ಟು ಹಿಡಿದರು. ಇದೇ ವೇಳೆ ಹರ್ಷ ವಿರುದ್ಧ ಬಿ.ಆರ್.ರಾಮಚಂದ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಪಿಡಬ್ಲ್ಯುಡಿ ಇಲಾಖೆಯಲ್ಲಿ ಲಂಚ ಕೊಡದೆ ಯಾವ ಕೆಲಸವೂ ಆಗೋದಿಲ್ಲ. ಟೆಂಡರ್ ಕೊಡುವಾಗಲೂ ಲಂಚ ನೀಡಬೇಕು, ಬಿಲ್ ಪಾವತಿಗೂ ಲಂಚ ಕೊಡಬೇಕು. ಸರ್ಕಾರ ಕೂಡಲೇ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಪಡಿಸಿದರು.

ಕಣ್ಣೀರಿಟ್ಟ ಪತ್ನಿ, ಸಂತೈಸಲು ಓಡೋಡಿ ಬಂದ ಪತಿ..!:

ಗುತ್ತಿಗೆದಾರರ ಆಕ್ರೋಶಕ್ಕೆ ಗುರಿಯಾದ ತಾಂತ್ರಿಕ ಸಹಾಯಕಿ ವಿ.ಶಿಲ್ಪಾ ಗುತ್ತಿಗೆದಾರರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾಗಿ ಕೊನೆಗೆ ಕಣ್ಣೀರಿಡಲಾರಂಭಿಸಿದರು. ಕಚೇರಿಯಲ್ಲಿ ನಡೆದ ಬೆಳವಣಿಗೆಗಳನ್ನು ಪತಿಗೆ ದೂರವಾಣಿ ಕರೆ ಮಾಡಿ ಕಣ್ಣೀರಿಡುತ್ತಲೇ ವಿವರಿಸಿದರು.

ಕಣ್ಣೀರಾಕಿದ ಪತ್ನಿಯ ಸಂತೈಸಲು ಕಚೇರಿಗೆ ಪತಿ ಧಾವಿಸಿ ಬಂದರು. ತಾಂತ್ರಿಕ ಸಹಾಯಕಿ ಕಚೇರಿಯಲ್ಲಿ ಕುಳಿತು ಪತ್ನಿಯಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಗುತ್ತಿಗೆದಾರರ ಜೊತೆಯೂ ಆಕೆಯ ಪತಿ ವಾಗ್ವಾದ ನಡೆಸಿದರು. ತಕ್ಷಣವೇ ಮಹಿಳಾ ಅಧಿಕಾರಿಯ ಪತಿಯನ್ನು ಗುತ್ತಿಗೆದಾರರು ಹೊರ ಕಳುಹಿಸಿದರು.

ಈ ಸಮಯದಲ್ಲಿ ಮಾಧ್ಯಮದವರ ಬಗ್ಗೆಯೂ ಮಹಿಳಾ ಅಧಿಕಾರಿ ಪತಿ ವ್ಯಂಗ್ಯವಾಡಲಾರಂಭಿಸಿದನು. ಕಚೇರಿಯಲ್ಲಿ ಏನೂ ಆಗಿಲ್ಲ, ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಸರ್ಟಿಫಿಕೇಟ್ ನೀಡಿದನು. ಮಾನಸಿಕ ಅಸ್ವಸ್ಥನಂತೆ ವರ್ತಿಸಲಾರಂಭಿಸಿದಾಗ ವಿಧಿ ಇಲ್ಲದೇ ಪೊಲೀಸರು ಅವನನ್ನು ಕಚೇರಿಯಿಂದ ಹೊರಕಳುಹಿಸಿದರು.