ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ನೆಲಮಂಗಲದ ಗಾಣಿಗ ಸಮಾಜದ ಶ್ರೀತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಬಾಕಿ ಅನುದಾನ ಬಿಡುಗಡೆಗೆ ಸಚಿವ ಶಿವರಾಜ ತಂಗಡಗಿ ಲಂಚ ಕೇಳಿದ ಆರೋಪ ಹಿನ್ನೆಲೆ ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಮಠಕ್ಕೆ ಬಿಡುಗಡೆಯಾಗಬೇಕಿರುವ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಹಾಗೂ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಒತ್ತಾಯಿಸಿದರು.ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಶಿವರಾಜ ತಂಗಡಗಿಯವರು ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ ಬಾಕಿ ಹಣ ಬಿಡುಗಡೆಗೆ ಶೇ.20ರಿಂದ 25ರಷ್ಟು ಕಮಿಷನ್ ನೀಡಲು ಒತ್ತಾಯಿಸಿದ್ದು ಖಂಡನೀಯ. ನಾಡಿನ ವಿವಿಧ ಮಠ, ಮಂದಿರಗಳಿಗೆ ಅನುದಾನ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣವಿಲ್ಲದಾಗಿದೆ. ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಈಗ ಸಿಬಿಐ ತನಿಖೆಗೆ ನ್ಯಾಯಾಲಯದ ಆದೇಶವಾಗಿದೆ. ಈಗ ಮಠಗಳು ಲಂಚಕೊಟ್ಟು ಅನುದಾನ ಪಡೆಯುವಂತ ಹೀನಾಯ ಪರಿಸ್ಥಿತಿ ಬಂದೊದಗಿದೆ. ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿಗಾಗಿ ₹3.5 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಇದರಲ್ಲಿ ಈಗಾಗಲೇ ಸುಮಾರು ₹2 ಕೋಟಿ ಬಿಡುಗಡೆ ಮಾಡಲಾಗಿದೆ. ಇದರ ನಡುವೆ ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಾಕಿ ₹1.5ಕೋಟಿ ಅನುದಾನ ಬಿಡುಗಡೆಗೆ ಮಠದ ಸ್ವಾಮೀಜಿಗಳು ಸಚಿವ ಶಿವರಾಜ ತಂಗಡಿಯವರಿಗೆ ಮನವಿ ಮಾಡಿದ್ದರೂ, ಏನೂ ಪ್ರಯೋಜನವಾಗದ ಹಿನ್ನೆಲೆ ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯದಿಂದ ಮಠಕ್ಕೆ ಬಿಡುಗಡೆ ಮಾಡಬೇಕಿರುವ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಆದೇಶಿಸಿತ್ತು ಎಂದು ತಿಳಿಸಿದರು.ಇದೇ ವೇಳೆ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಶ್ರೀರಾಮ ಮಂದಿರಕ್ಕೆ ಮಂಜೂರಾಗಿದ್ದ ಅನುದಾನದಲ್ಲಿ ಅರ್ಧದಷ್ಟು ಹಣ ಕಳೆದ ಎರಡು ವರ್ಷಗಳಿಂದ ಬಿಡುಗಡೆಯಾಗಿಲ್ಲ ಎಂದು ತಿಳಿಸಿದ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಶಾಸಕ ಭರತ್ ರೆಡ್ಡಿ ಅವರು ದೇವಸ್ಥಾನಗಳಿಗೆ ₹5 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆಂದು ಸನ್ಮಾನ ಮಾಡಿಸಿಕೊಂಡಿದ್ದಾರೆ. ಯಾವ ದೇವಸ್ಥಾನಗಳಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದಂತಾಗಿದೆ. ರಾಜ್ಯದಲ್ಲಿ ಪಡಿತರ ಸಾಗಣೆ ಮಾಡುವ ಲಾರಿಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡದ ಹಿನ್ನೆಲೆ ರಾಜ್ಯಾದ್ಯಂತ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲೂ 32 ಲಾರಿಗಳು ಸ್ಥಗಿತಗೊಂಡಿವೆ. ಇದರಿಂದ ಪಡಿತರ ಸಾಗಣೆ ಬಂದ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಅನುದಾನವಿಲ್ಲವೆಂದು ಶಾಸಕ ಬಸವರಾಜ ರಾಯರೆಡ್ಡಿ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರೇ ಹೇಳಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ದೂರಿದರು. ಗುರು ಪೌರ್ಣಿಮೆ ನಿಮಿತ್ತ ನಗರದ ಶಾಲಾ-ಕಾಲೇಜುಗಳಲ್ಲಿ ಜು.10ರಂದು ಬಿಜೆಪಿಯಿಂದ ಕಾರ್ಯಕ್ರಮ ನಡೆಸಲಾಗುವುದು ಎಂದು ಮೋಕಾ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೆ.ಎಸ್. ದಿವಾಕರ್, ಜಿ.ವೆಂಕಟರಮಣ ಇತರರಿದ್ದರು.
;Resize=(128,128))
;Resize=(128,128))
;Resize=(128,128))
)
;Resize=(128,128))