ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಮದುವೆ ಆಹ್ವಾನ ಪತ್ರಿಕೆ ಹಂಚಿಕೆಗೆ ತೆರಳಿದ್ದಾಗ ದೇವರ ಉತ್ಸವ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಮದು ಮಗನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಹುಳಿಮಾವು ಸಮೀಪ ಗುರುವಾರ ನಸುಕಿನಲ್ಲಿ ನಡೆದಿದೆ.

ಬನಶಂಕರಿ ನಿವಾಸಿ ಪಿ.ಅಕ್ಷತ್‌ (28) ಮೃತ ದುರ್ದೈವಿ. ಹುಳಿಮಾವು ಬಳಿ ಸ್ನೇಹಿತರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಲು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಅಕ್ಷತ್ ಅವರ ಕುಟುಂಬ ಪೆಟ್ರೋಲ್ ಬಂಕ್ ಹಾಗೂ ಶಿಕ್ಷಣ ಸಂಸ್ಥೆ ಮಾಲಿಕತ್ವ ಹೊಂದಿದ್ದು, ಬನಶಂಕರಿಯಲ್ಲಿ ನೆಲೆಸಿದ್ದಾರೆ. ಏ.29ರಂದು ಅಕ್ಷತ್ ಮದುವೆ ನಿಗದಿಯಾಗಿತ್ತು. ಹೀಗಾಗಿ ಹುಳಿಮಾವು ಸುತ್ತಮುತ್ತ ತನ್ನ ಸ್ನೇಹಿತರು ಹಾಗೂ ಸಂಬಂಧಿಕರಿಗೆ ವಿವಾಹ ಆಹ್ವಾನ ಪತ್ರಿಕೆ ವಿತರಿಸಲು ಬುಧವಾರ ಬಂದಿದ್ದರು. ಆಗ ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ವಿಷಯ ಗೊತ್ತಾಗಿ ಗುರುವಾರ ದೇವರಿಗೆ ಪೂಜೆ ಸಲ್ಲಿಸಲು ತೆರಳಲು ಗೆಳೆಯನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಅಂತೆಯೇ ನಸುಕಿನ 5.30ರ ಸುಮಾರಿಗೆ ಸ್ನಾನ ಮುಗಿಸಿ ದೇವರ ಉತ್ಸವ ನೋಡಲು ಅಕ್ಷತ್ ತೆರಳಿದ್ದರು. ಆಗ ದೇವರ ಪಲ್ಲಕ್ಕಿ ನೋಡುತ್ತ ರಸ್ತೆ ಬದಿ ನಿಂತಿದ್ದಾಗ ಮೆರವಣಿಗೆಯಲ್ಲಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾರ್ವಜನಿಕರು ಕರೆದೊಯ್ದಿದ್ದಾರೆ. ಆದರೆ ತೀವ್ರ ರಸ್ತಸ್ರಾವದಿಂದ ಅಕ್ಷತ್ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.