ಕೊಳ್ಳೇಗಾಲದಲ್ಲಿ ಮಳೆಗೆ ಸೇತುವೆ ಕುಸಿತ, ಸಂಚಾರ ದುಸ್ಥರ

| Published : Nov 18 2024, 12:08 AM IST

ಸಾರಾಂಶ

ಕೊಳ್ಳೇಗಾಲದಲ್ಲಿ ಸತತ ಮಳೆಯಿಂದ ಗುಂಬಳ್ಳಿ, ಗಂಗವಾಡಿ ಮಾರ್ಗವಾಗಿ ಮುಂಟಿಪಾಳ್ಯ, ಬೆಲ್ಲವತ್ತಕ್ಕೆ ತೆರಳುವ ರಸ್ತೆ ತೀರಾ ಶಿಥಿಲಗೊಂಡಿದೆ. ಮಳೆಗೆ ಮಣ್ಣು ಕುಸಿತವಾಗಿ ರಸ್ತೆ ಶೋಚನೀಯ ಸ್ಥಿತಿ ತಲುಪಿ ಸಂಚಾರಕ್ಕೂ ಸಂಚಕಾರ ಉಂಟಾಗಿದೆ.

ಮುಂಟಿಪಾಳ್ಯ, ಬೆಲ್ಲವತ್ತ ರಸ್ತೆ ಶಿಥಿಲ । ಸಂಚಾರಕ್ಕೆ ಸಂಚಕಾರ । ಬರುತ್ತಿದ್ದ ಒಂದೇ ಬಸ್‌ ಸಂಚಾರವೂ ಸ್ಥಗಿತ । ಅಧಿಕಾರಿಗಳ ನಿರ್ಲಕ್ಷ್ಯ

ಎನ್.ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲದಲ್ಲಿ ಸತತ ಮಳೆಯಿಂದ ಗುಂಬಳ್ಳಿ, ಗಂಗವಾಡಿ ಮಾರ್ಗವಾಗಿ ಮುಂಟಿಪಾಳ್ಯ, ಬೆಲ್ಲವತ್ತಕ್ಕೆ ತೆರಳುವ ರಸ್ತೆ ತೀರಾ ಶಿಥಿಲಗೊಂಡಿದೆ. ಮಳೆಗೆ ಮಣ್ಣು ಕುಸಿತವಾಗಿ ರಸ್ತೆ ಶೋಚನೀಯ ಸ್ಥಿತಿ ತಲುಪಿ ಸಂಚಾರಕ್ಕೂ ಸಂಚಕಾರ ಉಂಟಾಗಿದೆ.

ಗಂಗವಾಡಿ, ದಾಸನಹುಂಡಿ ಮಾರ್ಗವಾಗಿ ಮುಂಟಿಪಾಳ್ಯ, ಬೆಲ್ಲವತ್ತ ಗ್ರಾಮಕ್ಕೆ ತೆರಳುವ ರಸ್ತೆ ಮಾರ್ಗಮದ್ಯದಲ್ಲಿ ಸೇತುವೆ ಕುಸಿದಿದೆ. ಅಲ್ಲದೆ ಅದೇ ರಸ್ತೆಯಲ್ಲಿ ಉಂಟಾದ ಮಣ್ಣಿನ ಸವಕಳಿಯಿಂದಾಗಿ ರಸ್ತೆ ಸಹ ಕುಸಿದಿದ್ದು ಕಳೆದ ಹಲವಾರು ದಿನಗಳಿಂದಲೂ ಇಲ್ಲಿ ಸಂಚರಿಸಲು ದ್ವಿಚಕ್ರವಾಹನ ಸವಾರರು ಪರದಾಡುತ್ತಿದ್ದಾರೆ. ಈ ರಸ್ತೆ ತುರ್ತು ದುರಸ್ತಿಗೆ ಮುಂದಾಗದಿದ್ದಲ್ಲಿ ಹಲವು ಅವಘಡಗಳಿಗೂ ಕಾರಣವಾಗುವ ಸಾಧ್ಯತೆ ಹೆಚ್ಚಿದೆ.

ಗಂಗವಾಡಿ, ಯರಗಂಬಳ್ಳಿ ಮಾರ್ಗವಾಗಿ ದೇವರಹಳ್ಳಿ ಅಡ್ಡ ರಸ್ತೆ ಮೂಲಕ ಮುಂಟಿಪಾಳ್ಯ, ಬೆಲ್ಲವತ್ತ ಗ್ರಾಮ ಮತ್ತು ಡ್ಯಾಂ ತಲುಪಬಹುದು. ಆದರೆ ದೇವರಹಳ್ಳಿ ಅಡ್ಡ ರಸ್ತೆಯ ತಿರುವಿನಲ್ಲಿ ಮೊದಲಿಗೆ ಸತತ ಮಳೆಯಿಂದಾಗಿ ಮಣ್ಣಿನ ಸವಕಳಿ ಉಂಟಾಗಿ ರಸ್ತೆ ಅರ್ದದಷ್ಟು ಕುಸಿದಿದೆ. ಅದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಸೇತುವೆಗೆ ಹೊಂದಿಕೊಂಡ ರಸ್ತೆಯಲ್ಲೂ ಸಹ ಮಣ್ಣು ಕುಸಿದು ಇಲ್ಲೂ ಅರ್ಧದಷ್ಟು ರಸ್ತೆ ಕುಸಿದಿದೆ. ಇನ್ನು ದೇವರಹಳ್ಳಿ ಅಡ್ಡರಸ್ತೆಯಿಂದ ಮುಂಟಿಪಾಳ್ಯ, ಬೆಲ್ಲವತ್ತ ಗ್ರಾಮಕ್ಕೆ ಸುಮಾರು 3 ಕಿ.ಮೀ. ಕ್ರಮಿಸಿ ಸಾಗಬೇಕು. 3 ಕಿ.ಮೀ. ರಸ್ತೆ ಸಹ ಗುಂಡಿಗಳಿಂದ ನಿರ್ಮಾಣವಾಗಿದೆ. ಗುಂಡಿಗಳ ನಡುವೆಯೇ ಈ ಗ್ರಾಮಗಳಿಗೆ ಸಾಗಬೇಕು, ಈ ಗ್ರಾಮಗಳಿಗೆ ದ್ವಿಚಕ್ರ ವಾಹನ ಸವಾರ ಸವಾರರು ಸಾಗಲು ತೀವ್ರ ಕಸರತ್ತು ಅನುಭವಿಸಬೇಕಿದೆ.

2 ಗ್ರಾಮಗಳಿಗೂ ಬಸ್ ಸ್ಥಗಿತ:

ರಸ್ತೆ ಮಣ್ಣಿನ ಸವಕಳಿ ಹಾಗೂ ಸೇತುವೆ ಕುಸಿತದಿಂದಾಗಿ ಬರುತ್ತಿದ್ದ ಒಂದು ಸರ್ಕಾರಿ ಬಸ್ ಸಹ ಬರುತ್ತಿಲ್ಲ, ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಸಂಕಷ್ಟಕ್ಕೆ ಸಿಲುವಂತಾಗಿದೆ. ಕಳೆದ ಹಲವಾರು ದಿನಗಳಿಂದೂ ಇತ್ತ ಬಸ್ ಬಾರದ ಕಾರಣ ವಿದ್ಯಾರ್ಥಿಗಳು ನಡೆದು ದೇವರಹಳ್ಳಿ ಅಡ್ಡ ರಸ್ತೆಗೆ ಸಾಗಬೇಕಿದೆ. ಬಸ್ 10 ನಿಮಿಷಗಳ ಕಾಲ ಅಡ್ಡರಸ್ತೆಯಲ್ಲಿ ನಿಲ್ಲುತ್ತದೆ. ಅಲ್ಲಿಯ ತನಕ ವಿದ್ಯಾರ್ಥಿಗಳು ನಡೆದು ಬರಬೇಕು, ಸಕಾಲದಲ್ಲಿ ಬರದಿದ್ದರೆ ಬಸ್ ಸಿಗುವುದಿಲ್ಲ, ಇದು ಇಲ್ಲಿನ ರಸ್ತೆಯ ಶೋಚನಿಯ ಸ್ಥಿತಿಯಿಂದಾಗಿ ವಿದ್ಯಾರ್ಥಿಗಳು, ನಾಗರಿಕರು ಯಾತನೆ ಪಡುವಂತಾಗಿದೆ.

ಹಿಂದುಳಿದ ವರ್ಗದ ಸಮುದಾಯ ಹೆಚ್ಚು ವಾಸವಾಗಿರುವ ಈ ಗ್ರಾಮಗಳ ರಸ್ತೆ ಸುಧಾರಣೆಗೆ ಜಿಲ್ಲಾಡಳಿತ ಮುಂದಾಗಬೇಕಿದೆ. ಅದಕ್ಕೂ ಮುನ್ನ ಸೇತುವೆ ಕುಸಿತ ಹಾಗೂ ರಸ್ತೆ ಕುಸಿತವನ್ನು ಶೀಘ್ರ ದುರಸ್ತಿ ಮಾಡಲು ಮುಂದಾಗಬೇಕು ಎಂಬ ಮನವಿ ಗ್ರಾಮಸ್ಥರದ್ದು.

ಈ ಭಾಗದ ರಸ್ತೆ ಸ್ಥಿತಿ ಗಮನಿಸಿದ್ದೇನೆ. ಇದರ ಸುಧಾರಣೆಗೆ ಶೀಘ್ರ ಕ್ರಮವಹಿಸುವೆ ಎನ್ನುತ್ತಾರೆ ಕೊಳ್ಳೇಗಾಲದ ಕ್ಷೇತ್ರದ ಶಾಸಕ ಎ.ಆರ್.ಕೖಷ್ಣಮೂರ್ತಿ.

ಜಿಲ್ಲಾಡಳಿತ ನಿರ್ಲಕ್ಷ್ಯ ಪ್ರದರ್ಶಿಸಿದ್ದೇ ಆದಲ್ಲಿ ಪ್ರತಿದಿನ ಶಾಲೆಗೆ ತೆರಳುವ ಗಿರಿಜನ ವಿದ್ಯಾರ್ಥಿಗಳು ಹಾಗೂ ಹಿಂದುಳಿದ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಹ ಕುಂಠಿತವಾಗಲಿದೆ. ಶೀಘ್ರ ಮುಂಟಿಪಾಳ್ಯ, ಬೆಲ್ಲವತ್ತ ಗ್ರಾಮಗಳಿಗೆ ಬಸ್ ಬರುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.