ಸೇತುವೆ ನಿರ್ಮಾಣ ನನೆಗುದಿಗೆ

| Published : Apr 18 2024, 02:17 AM IST

ಸಾರಾಂಶ

ಬಹುವರ್ಷದ ಕನಸು ನನಸಾಗುತ್ತಿದೆ ಎಂದು ಆ ಭಾಗದ ಸಾರ್ವಜನಿಕರು ಬಹಳ ಸಂತೋಷ ವ್ಯಕ್ತಪಡಿಸಿದ್ದರು. ಈಗ ಅವರ ನಿರೀಕ್ಷೆ ಹುಸಿಯಾಗುವಂತಾಗಿದೆ.

ಶಿರಸಿ: ವಿಘ್ನ ನಿವಾರಕನ ಕ್ಷೇತ್ರವಾದ ತಾಲೂಕಿನ ಗಣೇಶ ಪಾಲ್‌ನಲ್ಲಿ ಅನುಷ್ಠಾನ ಹಂತದಲ್ಲಿರುವ ಕೋಟ್ಯಂತರ ರು. ವೆಚ್ಚದ ಸೇತುವೆ ಕಾಮಗಾರಿಗೆ ಈಗ ಹಲವು ವಿಘ್ನಗಳು ಎದುರಾಗಿರುವುದರಿಂದ ಸ್ಥಗಿತಗೊಂಡಿದೆ.

ಅನುದಾನದ ಕೊರತೆ, ನೀಲನಕ್ಷೆ ತಯಾರಿಸಿ ಗುತ್ತಿಗೆ ಕಂಪನಿಗೆ ಹಸ್ತಾಂತರ ವಿಳಂಬ, ಜಾಗ ಗುರುತಿಸುವಿಕೆಯಲ್ಲಿ ಗೊಂದಲ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾಮಗಾರಿ ಆರಂಭಿಸಲು ೬ ತಿಂಗಳು ವಿಳಂಬವಾಗಿತ್ತು. ಇವೆಲ್ಲ ಗೊಂದಲಗಳು ನಿವಾರಣೆಯಾಗಿ ಗುತ್ತಿಗೆ ಕಂಪನಿಯು ಕಳೆದ ಡಿಸೆಂಬರ್‌ನಲ್ಲಿ ಕಾಮಗಾರಿಯನ್ನು ಆರಂಭಿಸಿತ್ತು. ಈಗ ಪುನಃ ವಿಘ್ನ ಬಂದಿರುವುದರಿಂದ ಅಡಿಪಾಯ ತೆಗೆದು, ಕಬ್ಬಿಣದ ಸರಳುಗಳನ್ನು ಅಳವಡಿಸಿ, ಶಿವರಾತ್ರಿಯ ನಂತರ ಕೆಲಸ ಸ್ಥಗಿತಗೊಳಿಸಲಾಗಿದೆ.

ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಪಂ ಮತ್ತು ಶಿರಸಿ ತಾಲೂಕಿನ ಕೊಡ್ನಗದ್ದೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ಬೃಹತ್ ಉದ್ದದ ಸೇತುವೆ ಕಾಮಗಾರಿಯು ಎರಡೂ ತಾಲೂಕಿನ ಸಾರ್ವಜನಿಕರ ಹಲವು ದಶಕದ ಬೇಡಿಕೆಯಾಗಿತ್ತು. ಹಿಂದಿನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಮತ್ತು ವಿಧಾನಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಕೆಆರ್‌ಡಿಸಿಎಲ್ ಮೂಲಕ ₹೧೧ ಕೋಟಿ ಅನುದಾನ ಬಿಡುಗಡೆ ಮಾಡಿತ್ತು.

೨೦೨೨ರ ಡಿಸೆಂಬರ್ ತಿಂಗಳಿನಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿಗೆ ವಿಘ್ನ ಎದುರಾಗಿತ್ತು. ೧೧ ತಿಂಗಳ ನಂತರ ಸೇತುವೆ ನಿರ್ಮಾಣ ಪ್ರಾರಂಭವಾಗಿರುವುದಕ್ಕೆ ಆ ಭಾಗದ ಜನರಲ್ಲಿ ಸಂತಸ ಮೂಡಿತ್ತು. ಬಹುವರ್ಷದ ಕನಸು ನನಸಾಗುತ್ತಿದೆ ಎಂದು ಆ ಭಾಗದ ಸಾರ್ವಜನಿಕರು ಬಹಳ ಸಂತೋಷ ವ್ಯಕ್ತಪಡಿಸಿದ್ದರು. ಈಗ ಅವರ ನಿರೀಕ್ಷೆ ಹುಸಿಯಾಗುವಂತಾಗಿದೆ.

ಯಲ್ಲಾಪುರ ಮತ್ತು ಶಿರಸಿ ತಾಲೂಕನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುವ ಸೇತುವೆ ನಿರ್ಮಾಣವಾದರೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಸದ್ಯ ಸೋಂದಾ, ಹಿತ್ಲಳ್ಳಿ ತುಡುಗುಣಿ ಮಾರ್ಗವಾಗಿ ಯಲ್ಲಾಪುರಕ್ಕೆ ತೆರಳುತ್ತಿದ್ದಾರೆ.

ಸೇತುವೆ ನಿರ್ಮಾಣವಾದ ಬಳಿಕ ಹಿತ್ಲಳ್ಳಿ, ಉಮ್ಮಚಗಿ, ಮಂಚಿಕೇರಿ ಗ್ರಾಪಂ ವ್ಯಾಪ್ತಿಯ ನೂರಾರು ಹಳ್ಳಿಗಳ ಜನರು ಶಿರಸಿಗೆ ಆಗಮಿಸಲು ಮತ್ತು ಕೊಡ್ನಗದ್ದೆ, ವಾನಳ್ಳಿ ಭಾಗದ ನೂರಾರು ಗ್ರಾಮಸ್ಥರಿಗೆ ಯಲ್ಲಾಪುರ ಸಂಪರ್ಕಿಸಲು ಬಹಳ ಸಮೀಪವಾಗಲಿದೆ. ಕೊಡ್ನಗದ್ದೆ ಗ್ರಾಪಂ ವ್ಯಾಪ್ತಿಯ ಸಾವಿರಾರು ಅಡಕೆ ಬೆಳೆಗಾರರು ರಾಶಿ ಅಡಕೆಗೆ(ಕೆಂಪಡಿಕೆ) ಯಲ್ಲಾಪುರದ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಗಣೇಶ ಪಾಲ್ ಸೇತುವೆ ನಿರ್ಮಾಣವಾದರೆ ಯಲ್ಲಾಪುರ ತಲುಪಲು ೨೦ ಕಿಮೀ ಉಳಿತಾಯವಾಗಲಿದೆ ಎನ್ನುತ್ತಾರೆ ಕೋಡ್ನಗದ್ದೆ ಗ್ರಾಪಂ ಸದಸ್ಯ ಪ್ರವೀಣ ಹೆಗಡೆ.ನೀತಿ ಸಂಹಿತೆ ಸಮಸ್ಯೆಯಿಲ್ಲ

ಕಳೆದ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಮಂಜೂರಿಯಾಗಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಪ್ರಾರಂಭಗೊಂಡ ಕಾಮಗಾರಿಗೆ ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಹೊಸ ಕಾಮಗಾರಿ ಆರಂಭಕ್ಕೆ ಅವಕಾಶವಿಲ್ಲ. ಯಾವ ಕಾರಣದಿಂದ ಕೆಲಸ ಬಂದ್ ಆಗಿದೆ ಎಂಬುದನ್ನು ಸಂಬಂಧಿಸಿದ ಇಲಾಖೆ ಗಮನವಹಿಸಿ, ಕಾಮಗಾರಿ ಆರಂಭಿಸಲು ಸೂಚನೆ ನೀಡಬೇಕು.

ಜೂನ್ ತಿಂಗಳಿನಿಂದ ಮಳೆಗಾಲ ಆರಂಭವಾದರೆ ಮೂರ‍್ನಾಲ್ಕು ತಿಂಗಳು ಕೆಲಸ ಬಂದ್ ಮಾಡಬೇಕಾಗುತ್ತದೆ. ೨ ವರ್ಷದ ಒಳಗಡೆ ಸಂಪೂರ್ಣಗೊಂಡು ಹಸ್ತಾಂತರಗೊಳ್ಳಬೇಕಿದೆ ಎಂಬ ಆದೇಶವಿದ್ದರೂ ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬುದರ ಬಗ್ಗೆ ವಿಚಾರಿಸಬೇಕು ಎಂಬುದು ಅಲ್ಲಿನ ನಿವಾಸಿಗಳ ಒತ್ತಾಯ.ಹಲವು ವರ್ಷದ ಬೇಡಿಕೆ: ಗಣೇಶಪಾಲ್ ಸೇತುವೆ ಈ ಭಾಗದ ಜನರ ಹಲವು ವರ್ಷದ ಬೇಡಿಕೆಯಾಗಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಹಣ ಮಂಜೂರಾಗಿತ್ತು. ಈಗಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಆರಂಭವಾಗಿತ್ತು. ಶಿವರಾತ್ರಿಯಿಂದ ಕೆಲಸ ಸ್ಥಗಿತಗೊಂಡಿದೆ. ಈ ಕುರಿತು ವಿಚಾರಿಸಿದರೆ ಕಾರ್ಮಿಕರ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಪ್ರವೀಣ ಹೆಗಡೆ, ಕೊಡ್ನಗದ್ದೆ ತಿಳಿಸಿದರು.