ಸಾರಾಂಶ
ಬೃಂದಾವನ ಪ್ರವೇಶದ್ವಾರದ ಮುಂಭಾಗದಲ್ಲಿ ಶಿವಮೊಗ್ಗ ಮೂಲದ ಪ್ರವಾಸಿಗರು ಸೆಲ್ಫೀ ಫೋಟೋ ತೆಗೆದುಕೊಳ್ಳಲು ಕಬ್ಬಿಣದ ಗ್ರಿಲ್‌ಗೆ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಇಟ್ಟಿದ್ದ ವ್ಯಾನಿಟಿ ಬ್ಯಾಗ್ ನೇತುಹಾಕಿ ಮರೆತು ಹೋಗಿದ್ದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಬೃಂದಾವನ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರೊಬ್ಬರು ಮರೆತು ಹೋಗಿದ್ದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ, ನಗದು ಇಟ್ಟಿದ್ದ ವ್ಯಾನಿಟಿ ಬ್ಯಾಗ್ ಅನ್ನು ಕೆಎಸ್ ಐಎಸ್ ಎಫ್ ಸಿಬ್ಬಂದಿ ಮಾಲೀಕರಿಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.ಬೃಂದಾವನ ಪ್ರವೇಶದ್ವಾರದ ಮುಂಭಾಗದಲ್ಲಿ ಶಿವಮೊಗ್ಗ ಮೂಲದ ಪ್ರವಾಸಿಗರು ಸೆಲ್ಫೀ ಫೋಟೋ ತೆಗೆದುಕೊಳ್ಳಲು ಕಬ್ಬಿಣದ ಗ್ರಿಲ್‌ಗೆ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಇಟ್ಟಿದ್ದ ವ್ಯಾನಿಟಿ ಬ್ಯಾಗ್ ನೇತುಹಾಕಿ ಮರೆತು ಹೋಗಿದ್ದರು.
ಪ್ರವೇಶ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಕೆಎಸ್ ಐಎಸ್ ಎಫ್ ಸಿಬ್ಬಂದಿ ಮಾದಪ್ಪ ಹಾಗೂ ಹರೀಶ್ ಅವರು ಅನಾಥವಾಗಿದ್ದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ, ನಗದು ಇದ್ದ ವ್ಯಾನಿಟಿ ಬ್ಯಾಗ್‌ನ್ನು ಗುರುತಿಸಿ ಜೋಪಾನವಾಗಿರಿಸಿದ್ದರು.ಸುಮಾರು 15 ಕಿ.ಮೀ ದೂರದ ಮೈಸೂರು ನಗರ ಹೂಟಗಳ್ಳಿ ಬಳಿ ತೆರಳಿದ್ದ ಪ್ರವಾಸಿಗರಿಗೆ ತಾವು ಮರೆತು ಹೋಗಿದ್ದ ಬ್ಯಾಗ್‌ನ ಬಗ್ಗೆ ನೆನಪಿಸಿಕೊಂಡು ಮತ್ತೆ ಬೃಂದಾವನಕ್ಕೆ ವಾಪಸ್ ಬಂದಾಗ ಸ್ಥಳದಲ್ಲಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಮಾದಪ್ಪ ಹಾಗೂ ಹರೀಶ್ ಬ್ಯಾಗ್‌ನ ಬಗ್ಗೆ ಮಾಹಿತಿ ಪಡೆದು ಪ್ರವಾಸಿಗರಿಗೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗು ನಗದು ಇದ್ದ ಬ್ಯಾಗನ್ನು ಪ್ರವಾಸಿಗರಿಗೆ ಹಿಂದಿರುಗಿಸಿದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಪೇದೆಗಳಾದ ಮಾದಪ್ಪ ಮತ್ತು ಹರೀಶ್ ರವರ ಕಾರ್ಯವನ್ನು ಕೆಆರ್‌ಎಸ್ ಅಣೆಕಟ್ಟೆ ಉಸ್ತುವಾರಿ ಕರ್ನಾಟಕ ಕೈಗಾರಿಕಾಪಡೆ ಡಿವೈಎಸ್ಪಿ ಪ್ರಮೋದ್ ಹಾಗೂ ಉಸ್ತುವಾರಿ ಇನ್ಸ್ ಪೆಕ್ಟರ್‌ಗಳಾದ ಪ್ರತಾಪ್, ಶಶಿಕಲಾ ಪ್ರಶಂಸಿದ್ದಾರೆ.