ಭಾರತವು 2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಹೊತ್ತಿಗೆ ಇಡೀ ದೇಶದ ಭವಿಷ್ಯವು ಇಂದಿನ ಪದವೀಧರರ ಕೈಯಲ್ಲಿದೆ. ಈ ಹಿನ್ನೆಲೆ ತಂತ್ರಜ್ಞಾನದಲ್ಲಿ ಭಾರತವನ್ನು ಮುಂಚೂಣಿ ದೇಶವನ್ನಾಗಿಸುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲೂ ಇದೆ ಎಂದು ರಾಜ್ಯಪಾಲ, ದಾವಣಗೆರೆ ವಿವಿ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ.

- ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವ । ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಭಾಷಣ । ಗಣ್ಯರ ಉಪಸ್ಥಿತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತವು 2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಹೊತ್ತಿಗೆ ಇಡೀ ದೇಶದ ಭವಿಷ್ಯವು ಇಂದಿನ ಪದವೀಧರರ ಕೈಯಲ್ಲಿದೆ. ಈ ಹಿನ್ನೆಲೆ ತಂತ್ರಜ್ಞಾನದಲ್ಲಿ ಭಾರತವನ್ನು ಮುಂಚೂಣಿ ದೇಶವನ್ನಾಗಿಸುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲೂ ಇದೆ ಎಂದು ರಾಜ್ಯಪಾಲ, ದಾವಣಗೆರೆ ವಿವಿ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

ತಾಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶುಕ್ರವಾರ 13ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಅವರು ಪದವಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು. ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವ ಅಥವಾ ಉದ್ಯೋಗ ಕಂಡುಕೊಳ್ಳುವ ಮಾರ್ಗವಷ್ಟೇ ಅಲ್ಲ. ಅದು ನೈತಿಕತೆ, ಸಹಾನುಭೂತಿ, ಸಾಮಾಜಿಕ ಜವಾಬ್ದಾರಿ ಬೆಳೆಸುವ ಸಂಸ್ಕಾರವಾಗಿದೆ ಎಂದರು.

ಯುವಶಕ್ತಿಯೇ ದೇಶದ ಬೆನ್ನೆಲುಬು:

ಸಂಶೋಧನೆ ಮತ್ತು ನಾವೀನ್ಯತೆ ಹಾಗೂ ಯುವಶಕ್ತಿಯೇ ವಿಕಸಿತ ಭಾರತದ ಅಡಿಪಾಯವಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ಹೊಂದಿರುವ ದೇಶ. ಈ ಯುವಶಕ್ತಿಯನ್ನೇ ನಮ್ಮ ದೇಶದ ಬೆನ್ನೆಲುಬಾಗಿದೆ. ಸ್ವಾಮಿ ವಿವೇಕಾನಂದರ ಆಶಯದಂತೆ ದೇಶದ ವಿಕಾಸಕ್ಕೆ ಯುವಜನತೆ ಕಟಿಬದ್ಧರಾಗಬೇಕು. ಭಾರತವನ್ನು ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿಸವು ನಿಮ್ಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಸೋಲು ಅಮೂಲ್ಯ ಪಾಠ:

ಪ್ರಸ್ತುತ ಯುಗವು ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಸುಧಾರಿತ ತಂತ್ರಜ್ಞಾನಗಳ ಡಿಜಿಟಲ್ ಯುಗವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗೆ ಅಂಟಿಕೊಳ್ಳದೇ, ಹೊಸ ಆಲೋಚನೆಗಳೊಂದಿಗೆ ನವೋದ್ಯಮಗಳ ಸ್ಥಾಪನೆಗೆ ಮುಂದಾಗಬೇಕು. ಸೋಲಿಗೆ ಯಾವುದೇ ಕಾರಣಕ್ಕೂ ಹೆದರಬಾರದು. ಎದೆಗುಂದಬಾರದು. ಸ್ಟಾರ್ಟ್‌ ಅಪ್ ಲೋಕದಲ್ಲಿ ಸೋಲೆಂಬುದು ಒಂದು ಅಮೂಲ್ಯ ಪಾಠ ಇದ್ದಂತೆ ಎಂದರು.

ದಾವಿವಿ ಸಾಧನೆ ಪ್ರೇರಣೆಯಾಗಲಿ:

ಪ್ರತಿಯೊಬ್ಬ ವಿದ್ಯಾರ್ಥಿ- ವಿದ್ಯಾರ್ಥಿನಿಯ ಸಾಧನೆಯಲ್ಲಿ ತಾಯಿಯ ಪ್ರಾರ್ಥನೆ, ತಂದೆಯ ತ್ಯಾಗ ಮತ್ತು ಗುರುಗಳ ನಂಬಿಕೆ ಅಡಗಿರುತ್ತದೆ. ಜೀವನದಲ್ಲಿ ಯಶಸ್ಸು ಪಡೆದಾಗ ಈ ಎಲ್ಲರ ಋಣವನ್ನು ಕೃತಜ್ಞತೆ ಮತ್ತು ಸೇವೆ ಮೂಲಕ ತೀರಿಸಬೇಕು. ದಾವಣಗೆರೆ ವಿಶ್ವವಿದ್ಯಾನಿಲಯದು ಅಲ್ಪಾವಧಿಯಲ್ಲೇ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ತೋರುತ್ತಿರುವ ಬದ್ಧತೆ ಇತರರಿಗೂ ಪ್ರೇರಣೆಯಾಗಿದೆ ಎಂದು ರಾಜ್ಯಪಾಲರು ಶ್ಲಾಘಿಸಿದರು.

ದೇಶ, ವಿದೇಶಗಳಲ್ಲೂ ಸಂಶೋಧನೆ:

ಪ್ರಾಸ್ತಾವಿಕವಾಗಿ ಮಾತನಾಡಿದ ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ, ಅತ್ಯಂತ ಕಡಿಮೆ ಅವಧಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ವಿಜ್ಞಾನಿಗಳು ದೇಶ, ವಿದೇಶಗಳಲ್ಲೂ ಸಂಶೋಧನೆ ಕೈಗೊಳ್ಳುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಅಧ್ಯಾಪಕರ ಜೊತೆಗೆ ವಿದ್ಯಾರ್ಥಿಗಳಿಗೂ ವಿದೇಶಗಳಲ್ಲಿ ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ದಾವಿವಿ ಕೇವಲ ಶೈಕ್ಷಣಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗಿಲ್ಲ. ವಿವಿ ವ್ಯಾಪ್ತಿಯ 10 ಗ್ರಾಮಗಳಲ್ಲಿ ದತ್ತು ಪಡೆದು, ಅವುಗಳ ಸರ್ವತೋಮುಖ ಅಭಿವೃದ್ಧಿಗೂ ಕ್ರಮ ಕೈಗೊಂಡಿದೆ. ವಿವಿಯ ಎಂಸಿಎ ವಿಭಾಗಕ್ಕಾಗಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‌, ಸ್ಮಾರ್ಟ್ ತರಗತಿಗಳ ಹೊಸ ಕಟ್ಟಡಗಳನ್ನು ಸ್ಥಾಪಿಸಲಾಗಿದೆ. ಹೊಸತನ, ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುವಲ್ಲಿ ದಾವಿವಿ ಯಾವಾಗಲೂ ಮುಂದಿದೆ ಎಂದು ತಿಳಿಸಿದರು.

ಡಿಆರ್‌ಡಿಒ ಮಾಜಿ ನಿರ್ದೇಶಕ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಮಾಜಿ ಕಾರ್ಯದರ್ಶಿಗಳು, ಪ್ರಸ್ತುತ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರಾದ ಪದ್ಮವಿಭೂಷಣ ಡಾ. ವಾಸುದೇವ ಕೆ. ಅತ್ರೆ ಅನುಪಸ್ಥಿತಿಯಲ್ಲಿ ದಾವಿವಿ ಸಮಾಜಶಾಸ್ತ್ರ ವಿಭಾಗದ ಡೀನ್ ಪ್ರೊ.ಲೋಕೇಶ ಘಟಿಕೋತ್ಸವ ಭಾಷಣವನ್ನು ಓದಿದರು. ದಾವಿವಿ ಕುಲ ಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲ ಸಚಿವ ಪ್ರೊ. ಸಿ.ಕೆ.ರಮೇಶ, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಡೀನ್‌ಗಳು ಇದ್ದರು.

ಸಮಾಜ ಸೇವೆ, ಜನಹಿತಕ್ಕಾಗಿ ಶ್ರಮಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಎಚ್. ಮುರುಗೇಂದ್ರಪ್ಪ, ಚಳ್ಳಕೆರೆ ಎಂ.ರಾಮಪ್ಪ, ನಿವೃತ್ತ ಐಪಿಎಸ್ ಅಧಿಕಾರಿ ಎಲ್.ರೇವಣಸಿದ್ದಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ವಿ.ವಿ.ಯಿಂದ ಒಟ್ಟು 70 ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಪದವಿ, 2022 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 10,684 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಯಿತು. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ 45 ವಿದ್ಯಾರ್ಥಿಗಳಿಗೆ ಒಟ್ಟು 87 ಚಿನ್ನದ ಪದಕ ಪ್ರದಾನ ಮಾಡಿ, ಗೌರವಿಸಲಾಯಿತು. ದಾವಿವಿ ಕ್ಯಾಂಪಸ್‌ನ ಎಂ.ಕಾಂ. ವಿದ್ಯಾರ್ಥಿನಿ ಎನ್.ಬಿ.ನಯನಾ 7 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು, ಚಿನ್ನದ ಹುಡುಗಿ ಎಂಬ ಸಾಧನೆ ಮೆರೆದಿದ್ದಾರೆ.

- - -

(ಬಾಕ್ಸ್‌)

* 45 ವಿದ್ಯಾರ್ಥಿಗಳಿಗೆ 87 ಚಿನ್ನದ ಪದಕ ಪ್ರದಾನ

ದಾವಣಗೆರೆ ವಿಶ್ವವಿದ್ಯಾನಿಲಯದ ಈ ಸಾಲಿನಲ್ಲಿ 70 ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಪದವಿ, 2022 ಸ್ನಾತಕೋತ್ತರ ಪದವಿ, 10684 ಸ್ನಾತಕ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗಿದೆ ಎಂದು ದಾವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದರು. ಒಟ್ಟು 45 ವಿದ್ಯಾರ್ಥಿಗಳು 87 ಚಿನ್ನದ ಪಕಗಳನ್ನು ಮತ್ತು ಸುವರ್ಣ ಪದಕ ಪಡೆಯುತ್ತಿದ್ದಾರೆ. ಸ್ನಾತಕೋತ್ತರ ಹಂತದಲ್ಲಿ ಶೇ.91.4, ಸ್ನಾತಕ ಹಂತದಲ್ಲಿ ಶೇ.58.77 ಉತ್ತೀರ್ಣತೆಯ ಪ್ರಮಾಣ ದಾಖಲಾಗಿದೆ. ವಿ.ವಿ.ಯ ಎಚ್-ಇಂಡೆಕ್ಸ್ 72ಕ್ಕೆ ಏರಿಕೆಯಾಗಿದೆ. ಒಟ್ಟು 27,259 ಸೈಟೇಷನ್ಸ್ ದಾಖಲಾಗಿವೆ. ಅಲ್ಲದೇ, ನಾಲ್ವರು ಪ್ರಾಧ್ಯಾಪಕರು ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೊಸ ನೀತಿಗಳ ಅನುಷ್ಠಾನದಲ್ಲೂ ದಾವಿವಿ ಮುಂದಿದೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಅಳವಡಿಸಿಕೊಂಡ ಮೊದಲ ವಿವಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ 1,200 ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಕುಲಪತಿ ವಿವರಿಸಿದರು.

- - -

-(ಫೋಟೋಗಳಿವೆ.)