ದೆಹಲಿಯಲ್ಲಿ ನನ್ನ ಭೇಟಿಗೆ ಬರುವವರೆಲ್ಲರೂ ಶ್ರೀಮಂತರೇ ಆಗಿದ್ದಾರೆ. ಸಾಮಾನ್ಯ ಜನರು ನನ್ನನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ನಾನು ಅವರ ಕಷ್ಟ ಸುಖ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇಲ್ಲಿನ ಜನರು ನನ್ನನ್ನು ಕುಟುಂಬದ ಸದಸ್ಯನ ರೀತಿ ಕಾಣುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮುಂದಿನ ಎರಡು ವರ್ಷಗಳಲ್ಲಿ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂಗಿತ ವ್ಯಕ್ತಪಡಿಸಿದರು.ತಾಲೂಕಿನ ಬಳಿಕಟ್ಟ ಗ್ರಾಮದಲ್ಲಿ ಶ್ರೀರಾಮ ಮಂದಿರ ಪುನರ್ ನಿರ್ಮಾಣ ಮತ್ತು ಶ್ರೀಮಾರಮ್ಮ ದೇವಿ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಬಳಗಟ್ಟ ಏತ ನೀರಾವರಿ ಯೋಜನೆಗೆ 300 ಕೋಟಿ ರು. ಬಿಡುಗಡೆ ಮಾಡಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೆಹಲಿಯಲ್ಲಿ ನನ್ನ ಭೇಟಿಗೆ ಬರುವವರೆಲ್ಲರೂ ಶ್ರೀಮಂತರೇ ಆಗಿದ್ದಾರೆ. ಸಾಮಾನ್ಯ ಜನರು ನನ್ನನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ನಾನು ಅವರ ಕಷ್ಟ ಸುಖ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇಲ್ಲಿನ ಜನರು ನನ್ನನ್ನು ಕುಟುಂಬದ ಸದಸ್ಯನ ರೀತಿ ಕಾಣುತ್ತಿದ್ದಾರೆ. ಜನರ ಆಶೀರ್ವಾದದಿಂದಲೇ ನಾನು ಕೇಂದ್ರ ಸಚಿವನಾಗಲು ಸಾಧ್ಯವಾಗಿದೆ. ಮುಂದಿನ ಎರಡು ವರ್ಷದಲ್ಲಿ ಜಿಲ್ಲೆಗೆ ಕೈಗಾರಿಕೆಯನ್ನು ತರುವ ಮೂಲಕ ಜನರ ಋಣ ತೀರಿಸಿ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಸುಳಿವು ನೀಡಿದರು.ರಾಜ್ಯದ ಜನರ ಬದುಕನ್ನು ಸುಧಾರಿಸುವ ಸಲುವಾಗಿ ಮುಂದಿನ ಚುನಾವಣೆಯಲ್ಲಿ ಐದು ವರ್ಷಗಳ ಸರ್ಕಾರ ನೀಡುತ್ತೀರೆಂಬ ಭರವಸೆ ನನಗಿದೆ. ಜನರ ಆಶೀರ್ವಾದವೇ ನನ್ನ ಪಾಲಿಗೆ ಇರುವ ದೊಡ್ಡ ಶಕ್ತಿ. ಆ ಶಕ್ತಿಯಿಂದಲೇ ಆರೋಗ್ಯ ಸಮಸ್ಯೆಗಳನ್ನೆಲ್ಲ ಗೆದ್ದು ಬಂದಿದ್ದೇನೆ. ಅಧಿಕಾರ ಸಿಕ್ಕಾಗ ನಾನು ಯಾವ ರೀತಿ ನಡೆದುಕೊಂಡಿದ್ದೇನೆ, ಜನರ ಕಷ್ಟ ಸುಖಗಳಿಗೆ ಯಾವ ರೀತಿ ಸ್ಪಂದಿಸಿದ್ದೇನೆ ಎಂಬುದೆಲ್ಲಾ ನಿಮಗೆ ಗೊತ್ತಿದೆ. ನೀವು ನನ್ನನ್ನು ನಿಮ್ಮ ಕುಟುಂಬದ ಸದಸ್ಯನ ರೀತಿ ಕಂಡಿರುವಂತೆ ನಾನು ಕೂಡ ನಿಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬನಾಗಿ ನಿಮ್ಮ ಜೊತೆಯಲ್ಲೇ ಮುಂದೆಯೂ ಇರುವುದಾಗಿ ಅಭಯ ನೀಡಿದರು.
ಪುಟ್ಟರಾಜುರನ್ನು ಮರೆಯಬೇಡಿ:ಅಭಿವೃದ್ಧಿ ಎಂದರೆ ಪುಟ್ಟರಾಜು, ಪುಟ್ಟರಾಜು ಎಂದರೆ ಅಭಿವೃದ್ಧಿ. ಕ್ಷೇತ್ರದ ಯಾವುದೇ ಕುಟುಂಬವಿರಲಿ ಅಥವಾ ಸಮಸ್ಯೆಗಳಿರಲಿ ಮೊದಲು ಅದಕ್ಕೆ ಸ್ಪಂದಿಸುವ ಉತ್ತಮ ನಡವಳಿಕೆ ಅವರಲ್ಲಿದೆ. ಬಳಗಟ್ಟ ಏತ ನೀರಾವರಿ ಯೋಜನೆ ಜಾರಿಯಾಗಬೇಕಾದರು ಅವರೇ ಪ್ರಮುಖ ಕಾರಣರು. ಕ್ಷೇತ್ರದ ಜನರ ಋಣ ತೀರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಶ್ರಮವಹಿಸಿ ನಿರ್ವಹಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ಕ್ಷೇತ್ರದ ಜನರು ಪುಟ್ಟರಾಜು ಅವರನ್ನು ಮರೆಯಬಾರದು. ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮವಹಿಸುತ್ತಿರುವ ಅವರನ್ನು ಚುನಾವಣೆ ವೇಳೆ ಮರೆಯುತ್ತಿದ್ದೀರಿ. ಕ್ಷೇತ್ರದಲ್ಲೇ ಇರುವ ಪುಟ್ಟರಾಜುರನ್ನು ನಂಬದೆ ಸದಾಕಾಲ ಅಮೆರಿಕಾಕ್ಕೆ ಹೋಗಿ ಅತಿಥಿಯಂತೆ ಕ್ಷೇತ್ರಕ್ಕೆ ಬರುವವರನ್ನು ನಂಬುತ್ತಿದ್ದೀರಿ. ಅವರ ಹೆಗಲ ಮೇಲೆ ಸದಾ ಹಸಿರು ಟವಲ್ ಇರುವುದನ್ನು ನೋಡಿದ್ದೇನೆ. ಆದರೆ, ರೈತರು, ಜನರ ಸಮಸ್ಯೆಗೆ ಸ್ಪಂದಿಸಿದ್ದನ್ನು ನೋಡಿಯೇ ಇಲ್ಲ ಎಂದು ದರ್ಶನ್ ಪುಟ್ಟಣ್ಣಯ್ಯ ಹೆಸರೇಳದೆ ಟೀಕಿಸಿದರು.